ದೇಶದ ಭವಿಷ್ಯಕ್ಕಾಗಿ ಪ್ರಧಾನಿ ಮೋದಿಯನ್ನು ಮತ್ತೆ ಗೆಲ್ಲಿಸಿ: ಆರ್.ಆಶೋಕ್ ಮನವಿ

| Published : Apr 25 2024, 01:12 AM IST

ದೇಶದ ಭವಿಷ್ಯಕ್ಕಾಗಿ ಪ್ರಧಾನಿ ಮೋದಿಯನ್ನು ಮತ್ತೆ ಗೆಲ್ಲಿಸಿ: ಆರ್.ಆಶೋಕ್ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂತರಾಷ್ಟ್ರೀಯ ವಿಚಾರ, ದೇಶದ ಭದ್ರತೆ ಮತ್ತು ಅಭಿವೃದ್ಧಿಗಳ ನಡುವೆ ನಡೆಯುವಂತಹ ಚುನಾವಣೆಯಾಗಿರುವುದರಿಂದ ಸಮರ್ಥ ನಾಯಕ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೆ ಗೆಲ್ಲಿಸಬೇಕೆಂದು ಮಾಜಿ ಸಚಿವ ಆರ್.ಆಶೋಕ್ ಕರೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ-ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಅಂತರಾಷ್ಟ್ರೀಯ ವಿಚಾರ, ದೇಶದ ಭದ್ರತೆ ಮತ್ತು ಅಭಿವೃದ್ಧಿಗಳ ನಡುವೆ ನಡೆಯುವಂತಹ ಚುನಾವಣೆಯಾಗಿರುವುದರಿಂದ ಸಮರ್ಥ ನಾಯಕ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೆ ಗೆಲ್ಲಿಸಬೇಕೆಂದು ಮಾಜಿ ಸಚಿವ ಆರ್.ಆಶೋಕ್ ಕರೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎನ್‌ಡಿಎ ಮೈತ್ರಿಕೂಟ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶ ಉಳಿದರೇ ನಾವು ಉಳಿಯುತ್ತೇವೆ. ಎಲ್ಲಕ್ಕಿಂತಲೂ ದೇಶದ ಭವಿಷ್ಯ ಮುಖ್ಯ. ಆದ್ದರಿಂದ ಇನ್ನುಳಿದ ಸಮಯದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಯವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ನರೇಂದ್ರ ಮೋದಿಯವರ ಕೈ ಭದ್ರ ಪಡಿಸಬೇಕೆಂದರು.ಕಾಂಗ್ರೆಸ್‌ನವರು ಅಧಿಕಾರದಲ್ಲಿ ಇದ್ದಾಗ ದೇಶವನ್ನು ಲೂಟಿ ಹೊಡೆದಿದ್ದಾರೆ. ಅವರು ಲೂಟಿ ಹೊಡೆದ ಹಣವನ್ನು ಕೇಂದ್ರ ಸರ್ಕಾರ ಜನರಿಗೆ ಮತ್ತೆ ಹಿಂದಿರುಗಿಸುವಂತ ಕೆಲಸ ಮಾಡುತ್ತಿದೆ. ದೇಶವನ್ನು ೧೦ ವರ್ಷಗಳ ಕಾಲ ಸುಭದ್ರವಾಗಿ ಕಟ್ಟಿ ಕೊಟ್ಟಿರುವ ಪ್ರಧಾನಿ ಮೋದಿಯನ್ನು 3ನೇ ಬಾರಿಗೆ ಆಯ್ಕೆ ಮಾಡಬೇಕು ಎಂದ ಅವರು ಕಾಫಿ ದೇಶದ ಆದಾಯವನ್ನು ದ್ವಿಗುಣಗೊಳಿಸುತ್ತದೆ.

ಈ ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದ ವೇಳೆಯಲ್ಲಿ ಒತ್ತುವರಿಯಾದ ಜಾಗದಲ್ಲಿ ಕಾಫಿ ಬೆಳೆ ಬೆಳೆದುಕೊಂಡಿದ್ದರೇ ೧ರಿಂದ ಸುಮಾರು ೨೫ ಎಕರೆವರೆಗೆ ಲೀಸ್ ನೀಡುವ ಕಾನೂನು ಜಾರಿಗೆ ತಂದು ಕಾಯ್ದೆಯನ್ನು ಸಹ ರೂಪಿಸಿದ್ದೆವು. ಈ ಲೀಸ್ ನೀಡುವ ಸಂಬಂಧ ಸರ್ಕಾರ ಪತ್ರ ನೀಡಲು ಮಾತ್ರ ಬಾಕಿಯಿದೆ. ಆಶೋಕ್‌ಗೆ ಹೆಸರು ಬರುತ್ತದೆ ಎಂಬ ಒಂದೇ ಕಾರಣಕ್ಕೆ ಈಗಿನ ರಾಜ್ಯಸರ್ಕಾರ ಕಾಫಿ ಬೆಳೆಗಾರರಿಗೆ ಪತ್ರ ನೀಡಲು ಹಿಂದೇಟು ಹಾಕುತ್ತಿದೆ. ಎಷ್ಟೇ ಕಷ್ಟವಾದರೂ ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ಲೀಸ್ ಪತ್ರವನ್ನು ಕೊಡಿಸುವ ಭರವಸೆ ನೀಡಿದರು. ಮಾಜಿ ಸಚಿವ ಡಿ.ಎನ್. ಜೀವರಾಜ್ ಮಾತನಾಡಿ, ಬಿಜೆಪಿ ಅಭಿವೃದ್ಧಿ ಮೇಲೆ ಚುನಾವಣೆ ಮಾಡುತ್ತದೆ. ಕಾಂಗ್ರೆಸ್ ಸುಳ್ಳುಗಳನ್ನು ಹೇಳುತ್ತಾ ರಾಜಕಾರಣ ಮಾಡುತ್ತದೆ. ನುಡಿದಂತೆ ನಡೆಯುತ್ತೇವೆ ಎನ್ನುವ ರಾಜ್ಯಸರ್ಕಾರ ಶೃಂಗೇರಿ ಕ್ಷೇತ್ರದ ಮಹಿಳೆಯರಿಗೆ ಖಾಸಗಿ ಬಸ್‌ಗಳಲ್ಲಿ ಸಹ ಬಸ್ ಫ್ರೀ ಮಾಡಲಿ ಎಂದು ಸವಾಲು ಎಸೆದರು.ರಾಜೇಗೌಡರು ಎರಡನೇ ಅವಧಿಗೆ ಶಾಸಕರಾಗಿ ೧೧ ತಿಂಗಳು ಕಳೆದಿದೆ. ಅವರು ತಮ್ಮ ಅಭಿವೃದ್ಧಿ ಏನು ಎಂದು ಹೇಳಲಿ. ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಚರ್ಚೆಗೆ ಬರಲಿ ಎಂದರು. ನನ್ನ ಮತ್ತು ಗೋವಿಂದೇಗೌಡರ ಕಾಲದಲ್ಲಿ ನೀಡಿದ ಹಕ್ಕುಪತ್ರವನ್ನು ಮತ್ತೆ ಪರಿಶೀಲನೆ ನಡೆಸಲು ಶಾಸಕರು ಮುಂದಾಗಿದ್ದಾರೆ. ಹಕ್ಕುಪತ್ರಕ್ಕೂ ಖಾತ್ರಿ ಇಲ್ಲದಂತ ವಾತಾವರಣ ತರಲು ಮುಂದಾಗಿದ್ದಾರೆ. ಪಹಣಿಯಲ್ಲಿ ಅರಣ್ಯ ಎಂದು ನಮೂದಿಸಲು ತಿಳಿಸಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು, ಮಾಜಿ ಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ, ಬಿಜೆಪಿ ಮುಖಂಡರಾದ ಎಸ್.ಎನ್.ರಾಮಸ್ವಾಮಿ, ಪುಣ್ಯಪಾಲ್ ಮಾತನಾಡಿದರು. ಸಭೆಯಲ್ಲಿ ಕೊಪ್ಪ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಬಿಷೇಜ್ ಭಟ್, ಅರುಣ್ ಶಿವಪುರ, ರೇವಂತ್ ಗೌಡ ಮುಂತಾದ ವರಿದ್ದರು.