ಉಡುಪಿ: ಗಾಳಿಮಳೆಗೆ 60 ಮನೆಗಳಿಗೆ 60 ಲಕ್ಷ ರು.ಗೂ ಅಧಿಕ ಹಾನಿ

| Published : Jul 28 2025, 01:03 AM IST

ಸಾರಾಂಶ

ಶನಿವಾರ ರಾತ್ರಿ ಭಾರಿ ಗಾಳಿ ಮಳೆಯಾಗಿದ್ದರೂ ಭಾನುವಾರ ಒಂದೆರಡು ಬಾರಿ ಲಘು ಮಳೆಯಾಯಿತು. ಮಧ್ಯಾಹ್ನ ನಂತರ ಬಿಸಿಲು ಕಾಣಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ಒಂದು ತಿಂಗಳಿಂದ ಬಿಡದೇ ಸುರಿದ ಮಳೆ ಭಾನುವಾರ ಕೆಲಕಾಲ ರಜೆ ಮಾಡಿದಂತಿತ್ತು. ಶನಿವಾರ ರಾತ್ರಿ ಭಾರಿ ಗಾಳಿ ಮಳೆಯಾಗಿದ್ದರೂ, ಭಾನುವಾರ ಒಂದೆರಡು ಬಾರಿ ಲಘು ಮಳೆಯಾಯಿತು. ಮಧ್ಯಾಹ್ನದ ನಂತರ ಬಹಳ ದಿನಗಳ ನಂತರ ಒಳ್ಳೆಯ ಬಿಸಿಲು ಕಾಣಿಸಿಕೊಂಡಿತು.

ಕಳೆದ 24 ಗಂಟೆಗಳಲ್ಲಿ ಜಿಲ್ಲಾದ್ಯಂತ ಗಾಳಿ ಮಳೆಗೆ 2 ಮನೆಗಳು ಸಂಪೂರ್ಣ ಹಾನಿಗೊಂಡಿವೆ, ಅವು ಸೇರಿ 60 ಮನೆಗಳಿಗೆ 62 ಲಕ್ಷ ರು.ಗೂ ಅಧಿಕ ಹಾನಿಯಾಗಿದೆ. 7 ಜಾನುವಾರು ಹಟ್ಟಿ ಮತ್ತು 6 ತೋಟಗಳಿಗೂ ಸಾಕಷ್ಟು ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಕಾರ್ವಾಡಿ ಗ್ರಾಮದ ಕುಸುಮ ಎಂಬವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿ 5 ಲಕ್ಷ ರು. ಮತ್ತು ಕಂದಾವರ ಗ್ರಾಮದ ಸುಮತಿ ರಮೇಶ್ ಜೋಗಯ್ಯ ಅವರ ಮನೆ ಬಿದ್ದು ಸಂಪೂರ್ಣ ಹಾನಿಯಾಗಿ 3 ಲಕ್ಷ ರು., ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ಜೊಬೆಡ ಖಾಧರ್ ಅವರ ಮನೆಗೆ 1.20 ಲಕ್ಷ ರು., ಕಾಲ್ತೂಡು ಗ್ರಾಮದ ಗಿರಿಜ ಅವರ ಮನೆ ಮೇಲೆ ಮರಬಿದ್ದು 1 ಲಕ್ಷ ರು., ಶಿರೂರು ಗ್ರಾಮದ ಸಾಧು ಪೂಜಾರಿ ಅವರ ಮನೆಯ ಮೇಲೆ ಮರ ಬಿದ್ದು 1.50 ಲಕ್ಷ ರು. ನಷ್ಟವಾಗಿದೆ.

ಕುಂದಾಪುರ ತಾಲೂಕಿನಲ್ಲಿಯೇ ಅತೀ ಹೆಚ್ಚಿನ ಹಾನಿಯಾಗಿದ್ದು ಇಲ್ಲಿ ಒಟ್ಟು 41 ಮನೆಗಳಿಗೆ, ಬೈಂದೂರು ತಾಲೂಕಿನಲ್ಲಿ 8, ಹೆಬ್ರಿ ತಾಲೂಕಿನಲ್ಲಿ 7 ಮತ್ತು ಕಾಪು ತಾಲೂಕಿನಲ್ಲಿ 3 ಮನೆಗಳಿಗೆ ಹಾನಿಯಾಗಿದೆ.

ಭಾರೀ ಸುಳಿಗಾಳಿಯಿಂದ ಕುಂದಾಪುರ ತಾಲೂಕಿನ 6 ಅಡಕೆ ತೋಟಗಳಿಗೆ ಹಾನಿಯಾಗಿ 1.56 ಲಕ್ಷ ರು. ಹಾಗೂ 7 ಜಾನುವಾರು ಕೊಟ್ಟಿಗೆಗಳಿಗೆ 1.30 ಲಕ್ಷ ರು, ನಷ್ಟವಾಗಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 75 ಮಿ.ಮೀ.ಮಳೆಯಾಗಿದೆ. ತಾಲೂಕುವಾರಿ ಕಾರ್ಕಳ 55.30, ಕುಂದಾಪುರ 105.60, ಉಡುಪಿ 38.90, ಬೈಂದೂರು 81, ಬ್ರಹ್ಮಾವರ 66, ಕಾಪು 38.80, ಹೆಬ್ರಿ 89.20 ಮಿ.ಮೀ. ಮಳೆ ದಾಖಲಾಗಿದೆ.