ಹಳ್ಳಿಗಳ ನೆಮ್ಮದಿ ಕಸಿವ ಗಾಳಿಯಂತ್ರ

| Published : Sep 23 2025, 01:05 AM IST

ಸಾರಾಂಶ

ಕೆಳಗಳ ಕರ್ನಾರಹಟ್ಟಿ ಸೇರಿದಂತೆ ಹತ್ತಾರು ಹಳ್ಳಿಗಳ ಜನತೆಗೆ ಸಂಜೆ ಯಾಕಾಗುತ್ತದೆ ಎಂಬ ಭಯ ಕಾಡುತ್ತಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಈಗ ತಾಲೂಕಿನ ಗುಡೇಕೋಟೆ, ಹೊಸಹಳ್ಳಿ ಹೋಬಳಿಯ ಮೇಗಳ ಕರ್ನಾರಹಟ್ಟಿ, ಕೆಳಗಳ ಕರ್ನಾರಹಟ್ಟಿ ಸೇರಿದಂತೆ ಹತ್ತಾರು ಹಳ್ಳಿಗಳ ಜನತೆಗೆ ಸಂಜೆ ಯಾಕಾಗುತ್ತದೆ ಎಂಬ ಭಯ ಕಾಡುತ್ತಿದೆ.

ಸಂಜೆಯಾದರೆ ಸಾಕು ಗಾಳಿಯಂತ್ರಗಳು ತಿರುಗಲು ಶುರು ಮಾಡುತ್ತವೆ. ಈ ಎರಡು ಹಳ್ಳಿಗಳ ಮಕ್ಕಳು ಓದಲು ಆಗುತ್ತಿಲ್ಲ. ರಾತ್ರಿ ಬಹುತೇಕ ಜನತೆಗೆ ಶಬ್ದದ ಕಿರಿಕಿರಿಗೆ ನಿದ್ದೆಯೂ ಬರುತ್ತಿಲ್ಲ. ರೈತರೇ ತಮ್ಮ ಜಮೀನುಗಳಲ್ಲಿ ಗಾಳಿಯಂತ್ರ ನಿರ್ಮಿಸಲು ಅವಕಾಶ ಕೊಟ್ಟಿದ್ದಾರೆ. ಆದರೆ ಈಗ ಸ್ಥಳೀಯ ಮಧ್ಯವರ್ತಿಗಳು, ಭೂಮಾಲೀಕರ ಭಯಕ್ಕೆ ಹೆದರಿ ಯಾರೂ ಈ ಬಗ್ಗೆ ಧ್ವನಿ ಎತ್ತಲು ಮುಂದೆ ಬರುತ್ತಿಲ್ಲ. ನೆಮ್ಮದಿಯಾಗಿ ತಣ್ಣಗೆ ಇದ್ದ ತಾಲೂಕಿನ ಮೂಲೆಕಟ್ಟಿನ ಹಳ್ಳಿಗಳು ಈಗ ಕರ್ಕಶ ಶಬ್ದದ ಕೂಪಗಳಾಗಿವೆ.

ಗ್ರಾಮಗಳ ಸುತ್ತ 5 ಗಾಳಿಯಂತ್ರಗಳು ಎಲ್ಲ ದಿಕ್ಕಿನಲ್ಲಿ ಸುತ್ತುವರಿದಿವೆ. ಊರಿಂದ 1 ಕಿ.ಮೀ. ಒಳಗೆ ಇರುವುದರಿಂದ ಸಂಜೆ 5 ಗಾಳಿಯಂತ್ರಗಳು ತಿರುಗಲು ಶುರು ಮಾಡುತ್ತವೆ. ಗಾಳಿಯಂತ್ರದಿಂದ ತಮ್ಮ ಬದುಕು ಮೂರಾಬಟ್ಟೆಯಾಗುತ್ತಿದೆ ಎಂದು ಈಗ ಗೊತ್ತಾಗಿದೆ. ಆದರೂ ಈ ಭಾಗದ ಭೂಮಿ ನೀಡಿದ ಪ್ರಬಲರನ್ನು ಎದುರು ಹಾಕಿಕೊಳ್ಳಲು ಕಷ್ಟಸಾಧ್ಯ.

ಕೂಡ್ಲಿಗಿ ತಾಲೂಕಿನ ನೂರಾರು ಹಳ್ಳಿಗಳಲ್ಲಿ ಖಾಸಗಿ ವಿಂಡ್ ಕಂಪನಿಗಳು ಫ್ಯಾನ್ ಅಳವಡಿಸಿವೆ. ಹಗಲು-ರಾತ್ರಿ ಫ್ಯಾನ್‌ಗಳ ಆರ್ಭಟ ಸಹಿಸಿಕೊಳ್ಳಬೇಕು. ಈಗಲೇ ಎಚ್ಚೆತ್ತುಕೊಂಡು ಈ ಬಗ್ಗೆ ಧ್ವನಿ ಎತ್ತದೇ ಇದ್ದರೆ ಮುಂದಿನ ದಿನಗಳಲ್ಲಿ ಇಡೀ ತಾಲೂಕಿನ ಬದುಕು ಬರ್ಬರವಾಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಿದ್ದಾರೆ ಪ್ರಜ್ಞಾವಂತರು.

ಮೇಗಳ ಕರ್ನಾರಹಟ್ಟಿ, ಕೆಳಗಳ ಕರ್ನಾರಹಟ್ಟಿ ಗ್ರಾಮಗಳು ನಮ್ಮ ಗ್ರಾಪಂ ವ್ಯಾಪ್ತಿಗೆ ಬರಲಿದ್ದು, ಇಲ್ಲಿಯವರೆಗೂ ವಿಂಡ್ ಫ್ಯಾನ್‌ಗಳಿಂದ ತೊಂದರೆಯಾಗಿದೆ ಎಂದು ಯಾರೂ ಮನವಿ ನೀಡಿಲ್ಲ. ರೈತರೇ ಭೂಮಿಯನ್ನು ಗಾಳಿಯಂತ್ರ ಕಂಪನಿಗೆ ನೀಡಿದ್ದಾರೆ. ನಮಗೆ ವಿಂಡ್ ಫ್ಯಾನ್ ಬಗ್ಗೆ ಯಾವುದೇ ಗೈಡ್‌ಲೈನ್ಸ್ ಬಂದಿಲ್ಲ ಎನ್ನುತ್ತಾರೆ ಹುರುಳಿಹಾಳ್ ಪಿಡಿಒ ಕವಿತಾ.

ಕ್ರಮಕೈಗೊಳ್ಳಲಿ: ನಮ್ಮೂರಿನಲ್ಲಿ ಅರ್ಧ ಕಿಲೋ ಮೀಟರ್, ಒಂದು ಕಿಲೋ ಮೀಟರ್ ಒಳಗಡೆ ನಾಲ್ಕೈದು ಫ್ಯಾನ್ ಇವೆ. ಶಾಲೆಯ ಮಕ್ಕಳು ಸಂಜೆ ಓದಲು ಆಗ್ತಿಲ್ಲ. ಕೆಲವರಿಗೆ ರಾತ್ರಿ ಫ್ಯಾನ್ ಶಬ್ದಕ್ಕೆ ನಿದ್ದೆ ಬರ್ತಿಲ್ಲ. ಯಾರಿಗೆ ಹೇಳೋದು? ಈಗಾಗಲೇ ಲಕ್ಷಗಟ್ಟಲೇ ಹಣ ಪಡೆದು ರೈತರು ಖಾಸಗಿ ವಿಂಡ್ ಕಂಪನಿಗಳಿಗೆ ಭೂಮಿ ನೀಡಿದ್ದಾರೆ. ನಾವು ಕೇಳಿದರೆ ನಮ್ಮ ಹೊಲ ನಾವು ಕೊಟ್ಟಿದ್ದೀವಿ, ನೀನ್ಯಾರು ಕೇಳೋಕೆ? ಅಂತ ಹೇಳ್ತಾರೆ. ಈ ಬಗ್ಗೆ ತಾಲೂಕು ಆಡಳಿತ, ಜಿಲ್ಲಾಡಳಿತ ಊರ ಬಿಟ್ಟು 2 ಕಿ.ಮೀ. ದೂರ ಫ್ಯಾನ್‌ಗಳು ಇರುವಂತೆ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಹೆಸರೇಳದ ಕರ್ನಾರಹಟ್ಟಿ ಗ್ರಾಮದ ನೊಂದ ಜನತೆ.