ಸಾರಾಂಶ
ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ನಾವು ಎದುರಾಳಿ ಅಭ್ಯರ್ಥಿ ವಿರುದ್ಧ ಟೀಕೆ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಕುಂದೂರು ಜಿಪಂ ವ್ಯಾಪ್ತಿಯ ಹನುಮರಹಳ್ಳಿ, ಕಂಕನವಾಡ, ಚಿಕ್ಕನೆಲ್ಲೂರು ಹಾಗೂ ಕುಂದೂರು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಸಚಿವರು ಮತಯಾಚಿಸಿದರು. ಕಳೆದ ಚುನಾವಣೆಯಲ್ಲಿ ಸೋತರೂ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು, ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಶ್ರೀಮಂತರ ಪಕ್ಷ ಆಗಿದೆ. ಶ್ರೀಮಂತರು ಬರೀ ಶ್ರೀಮಂತರಾಗಿ, ಬಡವರನ್ನು ಬಡವರನ್ನಾಗಿಯೇ ಮಾಡುವುದು ಬಿಜೆಪಿಯ ಸಿದ್ಧಾಂತ ಆಗಿದೆ. ದೇಶದ ಉತ್ತಮ ಭವಿಷ್ಯಕ್ಕೆ ಕಾಂಗ್ರೆಸ್ ಬೇಕು. ಪ್ರಚಾರಪ್ರಿಯ ಬಿಜೆಪಿ ಪಕ್ಷ ಕ್ಷೇತ್ರಕ್ಕೆ ಬೇಡ ಎಂದರು. ಉಳುವವನೆ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತಂದಿದ್ದು, ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ್ದು, ಆರ್‌ಟಿಇ, ಆಹಾರ ಕಾಯ್ದೆ, ಆರ್‌ಟಿಐ ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್‌ಗಿದೆ. ೭೦ ವರ್ಷಗಳ ಹಿಂದೆ ಭಾರತ ಒಂದು ಬಡ ರಾಷ್ಟ್ರವಾಗಿತ್ತು. ಅಂದು ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಹೋರಾಡಿದ ಪಕ್ಷ ಕಾಂಗ್ರೆಸ್ ಎಂದರು. ಕರ್ನಾಟಕದಲ್ಲಿ ಸುಭದ್ರವಾದ ಸರ್ಕಾರವಿದ್ದು, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ್ ಅವರನ್ನು ಗೆಲ್ಲಿಸಿಕೊಡಿ, ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಐದು ಜನ ಕಾಂಗ್ರೆಸ್ ಶಾಸಕರಿದ್ದು, ಪಠಾಣ್ ಅವರು ಗೆದ್ದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಅನುಕೂಲ ಆಗಲಿದೆ. ಬಸವಣ್ಣ ತತ್ವದಡಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.