ಐದು ಸಲ ಗೆದ್ದು, ಒಮ್ಮೆ ಸೋಲಿಗೆ ಬೊಬ್ಬೆ ಸಲ್ಲದು: ಮಾಜಿ ಸಚಿವ ಎಸ್‌ಎಆರ್

| Published : Oct 02 2024, 01:18 AM IST

ಸಾರಾಂಶ

ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಗೆದ್ದಿದ್ದೇವೆ. ಒಗ್ಗಟ್ಟಾಗಿ ಇಲ್ಲದೇ ಇದ್ದಾಗ ಸೋತಿದ್ದೇವೆ. ಐದು ಸಾರಿ ಗೆದ್ದವರು ಒಂದು ಸಾರಿ ಸೋತಿದ್ದಕ್ಕೆ ಏನೋ ಆಗಿದೆ ಎಂದು ಬೊಬ್ಬೆ ಹಾಕುವುದು ಸರಿಯಲ್ಲ. ಮುಂದೆ ಎಲ್ಲರೂ ಒಗ್ಗಟ್ಟಾಗಿ ಹೋಗೋಣ ಎಂದು ಬಿಜೆಪಿ ಮುಖಂಡರಿಗೆ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಗೆದ್ದಿದ್ದೇವೆ. ಒಗ್ಗಟ್ಟಾಗಿ ಇಲ್ಲದೇ ಇದ್ದಾಗ ಸೋತಿದ್ದೇವೆ. ಐದು ಸಾರಿ ಗೆದ್ದವರು ಒಂದು ಸಾರಿ ಸೋತಿದ್ದಕ್ಕೆ ಏನೋ ಆಗಿದೆ ಎಂದು ಬೊಬ್ಬೆ ಹಾಕುವುದು ಸರಿಯಲ್ಲ. ಮುಂದೆ ಎಲ್ಲರೂ ಒಗ್ಗಟ್ಟಾಗಿ ಹೋಗೋಣ ಎಂದು ಬಿಜೆಪಿ ಮುಖಂಡರಿಗೆ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಹೇಳಿದರು.

ಇಲ್ಲಿನ ಶಿರಮಗೊಂಡನಹಳ್ಳಿಯ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಲಿಗೆ ಆರೋಪ ಮಾಡುವುದು ತಪ್ಪು. ಶಾಮನೂರು ಶಿವಶಂಕರಪ್ಪ ಕೂಡ ಹಲವು ಬಾರಿ ಸೋಲು ಕಂಡಿದ್ದಾರೆ. ಸಿದ್ದೇಶ್ವರ ಸೋಲು ಕಂಡಿದ್ದಕ್ಕೆ ಅಳುವುದು ಸರಿಯಲ್ಲ. ಹೋರಾಟ ಮಾಡಿ ಮತ್ತೆ ಗೆಲ್ಲೋಣ. ಯತ್ನಾಳ ಉತ್ತಮವಾಗಿ ಮಾತನಾಡಲಿ, ಸಾವಿರ ಕೋಟಿ ಆರೋಪ ಸರಿಯಲ್ಲ ಎಂದರು.

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿ ಚೆನ್ನಾಗಿ ಬೆಳೆಯುತ್ತಿದೆ. ಮೈಸೂರು ಪಾದಯಾತ್ರೆ ಬಳಿಕ ಕಾಂಗ್ರೆಸ್‌ಗೆ ಪೆಟ್ಟು ಬಿದ್ದಿದೆ. ಅಧ್ಯಕ್ಷ ಸ್ಥಾನ ನೀಡಿದ ಮೋದಿ, ಸಂತೋಷ ಸೇರಿ ಅನೇಕರಿಗೆ ಅವಮಾನ ಮಾಡಬಾರದು. ಪಕ್ಷಕ್ಕೆ ವಿರುದ್ಧವಾಗಿ ಮಾತಾಡುವುದನ್ನು ನಿಲ್ಲಿಸಬೇಕು. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಕಾರ್ಯಕರ್ತರ ಚುನಾವಣೆಗಳಲ್ಲಿ ಇಲ್ಲಿ ಒಗ್ಗೂಡಿ ಕೆಲಸ ಮಾಡೋಣ ಎಂದರು.

ವಿಪ ಮಾಜಿ ಸದಸ್ಯ ಡಾ. ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಕಾಂಗ್ರೆಸ್ ನಡವಳಿಕೆ ಹಾಗೂ ಲೂಟಿ ನೋಡಿ ಜನರು ಭ್ರಮನಿರಸ ಆಗಿದ್ದಾರೆ. ಮುಡಾ ಹಗರದ ನಿವೇಶನಗಳನ್ನು ಮರಳಿ ನೀಡುವುದಾಗಿ ಸಿದ್ದರಾಮಯ್ಯ ಪತ್ನಿ ಹೇಳಿದ್ದಾರೆ. ಇದಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಹೋರಾಟ ಕಾರಣ. ಸಿದ್ದರಾಮಯ್ಯ ತಪ್ಪು ಮಾಡಿದ್ದು ರಾಜೀನಾಮೆ ನೀಡಬೇಕು ಎಂದರು.

ಪಕ್ಷದ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಮಾತನಾಡಿ, ಯತ್ನಾಳ್, ನೀವು ವೀರಶೈವ ಲಿಂಗಾಯತ ಒಳಪಂಗಡಗಳನ್ನು ನಿಂದಿಸುತ್ತೀರಿ. ನೀವು ಹೇಗೆ ಮುಖ್ಯಮಂತ್ರಿ ಆಗುತ್ತೀರಿ. ಮಠಗಳ ಕೊಡುಗೆಯನ್ನ ಹಗುರವಾಗಿ ಮಾತನಾಡುತ್ತೀರಿ. ಯಡಿಯೂರಪ್ಪ ಬಗ್ಗೆ ಹೊಲಸು ಬಾಯಲ್ಲಿ ಮಾತನಾಡುವುದನ್ನು ನಿಲ್ಲಿಸಿ. 2ಎ ನಿಲ್ಲಿಸಿದವರ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ. ನಿಮ್ಮ ನಡವಳಿಕೆ ಬದಲಾಗದಿದ್ದರೆ ಘೇರಾವ್ ಹಾಕುತ್ತೇವೆ. ನೀವು ಹಿಂದೂ ಹುಲಿಯಲ್ಲ, ಇಲಿ. ಯಡಿಯೂರಪ್ಪ ಅವರನ್ನು ನಿಂದನೆ ಮಾಡುವುದನ್ನು ನಿಲ್ಲಿಸಿ. ಎಲ್ಲರೂ ಒಗ್ಗೂಡಿ ಹೋಗೋಣ ಎಂದು ಹೇಳಿದರು.

ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಪಾಲಿಕೆ ಸದಸ್ಯ ಕೆ.ಎಂ.ಸುರೇಶ, ಮುಖಂಡರಾದ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಪಕ್ಷದ ಕಾರ್ಯಕರ್ತರು, ಇತರರು ಇದ್ದರು.

- - -

-1ಕೆಡಿವಿಜಿ39ಃ ಎಂ.ಪಿ.ರೇಣುಕಾಚಾರ್ಯ

-1ಕೆಡಿವಿಜಿ40ಃ ಎಸ್.ಎ.ರವೀಂದ್ರನಾಥ