ಸಾರಾಂಶ
ಧಾರವಾಡ: ಬೆಳಗಾವಿಯಲ್ಲಿ ಈ ಬಾರಿ ಡಿ. 9ರಿಂದ 20ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅಧಿವೇಶನದಲ್ಲಿ ಅನೇಕ ಬಿಲ್‌ಗಳಿವೆ. ಅನೇಕ ವಿಷಯಗಳ ಬಗ್ಗೆ ಚರ್ಚೆ ಇದ್ದು, ಚಳಿಗಾಲ ಅಧಿವೇಶನ ಈ ಬಾರಿ ರಂಗೇರಲಿದೆ. ಆದರೆ, ಉತ್ತರ ಕರ್ನಾಟಕ ಬಗ್ಗೆ ಎಲ್ಲ ಶಾಸಕರು ಕಾಳಜಿ ವಹಿಸಬೇಕು ಎಂಬುದು ನನ್ನ ಅನಿಸಿಕೆ. ಅದಕ್ಕಾಗಿ ಅಧಿವೇಶನ ಮೊದಲೇ ವಿರೋಧ ಪಕ್ಷದ ನಾಯಕರ ಸಭೆ ಮಾಡಲಿದ್ದೇನೆ ಎಂದರು.
ಯಾವ ರೀತಿ ಅಧಿವೇಶನ ನಡೆಸಬೇಕು ಎಂದು ತೀರ್ಮಾನ ಮಾಡುತ್ತೇನೆ. ಡಿ. 2ಕ್ಕೆ ಸಭೆ ಇದ್ದು, ಅತ್ಯಂತ ಸರಳವಾಗಿ ಅಧಿವೇಶನ ನಡೆಸಬೇಕು ಹಾಗೂ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವಕ್ಫ್ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ನನ್ನದು ಸದನ ನಡೆಸುವ ಜವಾಬ್ದಾರಿ ಮಾತ್ರ. ಚರ್ಚೆ ಎರಡು ಪಕ್ಷಗಳಿಗೆ ಬಿಟ್ಟಿದ್ದು. ಸದನದಲ್ಲಿ ಈ ವಿಷಯ ಪ್ರಸ್ತಾಪವಾದಾಗ ಬಹಳ ಎಚ್ಚರಿಕೆಯಿಂದ ಕಾರ್ಯ ಮಾಡಬೇಕು ಎಂದರು.