ವಿಷಯವನ್ನುಗ್ರಾಮಸ್ಥರಿಗೆ ಮುಟ್ಟಿಸಿದ್ದು, ಯಾರೋ ಕಿಡಿಗೇಡಿಗಳು ಕೃತ್ಯ ನಡೆಸಿದ್ದಾರೆ. ಅರ್ಚಕರಲ್ಲಿ ಪರಿಹಾರ ಕೇಳಿದಾಗ ದೇವಿ ಮರು ಪ್ರತಿಷ್ಠಾಪನೆಗೆ ಹೋಮ, ಹವನಾದಿಗಳು ಕಟ್ಟುನಿಟ್ಟಿನಲ್ಲಿ ಮತ್ತೊಮ್ಮೆ ನಡೆಯಬೇಕಿದೆ ಎಂದು ತಿಳಿಸಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಗೊಂದಿಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೇವತೆ ದಂಡಿಯಮ್ಮ ದೇಗುಲದ ಪುನರ್ ಪ್ರತಿಷ್ಠಾಪನೆ ವೇಳೆ ಗುರುವಾರ ತಡರಾತ್ರಿ ಕಿಡಿಗೇಡಿಗಳು ಕೋಣ ಬಲಿ ನೀಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಹಳೆಯದಾದ ಗ್ರಾಮದೇವಿ ಗುಡಿ ನಿರ್ಮಾಣಕ್ಕೆ ದೇವಿ ಅಪ್ಪಣೆ ಆಗಿದ್ದ ಹಿನ್ನೆಲೆಯಲ್ಲಿ ದಾನಿಗಳ ಸಹಕಾರದಿಂದ ದೇಗುಲ ನೂತನವಾಗಿ ನಿರ್ಮಿಸಿ ಶಕ್ತಿ ದೇವಿ ದಂಡಿಯಮ್ಮದೇವಿ ಕಲ್ಲಿನ ಉದ್ಭವಮೂರ್ತಿಯನ್ನು ವಿಗ್ರಹರೂಪದಲ್ಲಿ ನಿರ್ಮಿಸಲು ದೇವಿಯ ಅಪ್ಪಣೆ, ಅರ್ಚಕರ ಪ್ರಶ್ನಾಶಾಸ್ತ್ರದಲ್ಲಿ ಕೇಳಿ ಬಂದಿತ್ತು.
ಓರ್ವ ಭಕ್ತೆ ಮೇಲೆ ದೇವಿ ಅವಾಹನೆಯಾಗಿ ಗುಡಿ ನಿರ್ಮಾಣ ಮಾಡಿ ಉತ್ಸವ, ಮೆರವಣಿಗೆ ನಡೆಸಲು ಅಪ್ಪಣೆ ನೀಡಿತ್ತು. 10 ವರ್ಷಗಳ ಹಿಂದಿನಿಂದಲೂ ದೇವಿ ಉತ್ಸವ ಮಾಡುವ ಮುನ್ನ ಗ್ರಾಮದ ಹೇಮಾವತಿ ಹಳೆ ನಾಲೆಯಲ್ಲಿ ದೇವಿ ಉತ್ಸವ ಮೂರ್ತಿ ತೊಳೆದು ಪುಣ್ಯಾಹ್ನದಂತಹ ಕಾರ್ಯ, ಪೂರ್ಣ ಕುಂಭಕ್ಕೆದೇವಿ ಅವಾಹನೆ ಮಾಡಿ ಮಹಿಳೆಯರಿಗೆ ತಲೆ ಮೇಲೆ ಹೊರಿಸಿಕೊಂಡು ಮೆರವಣಿಗೆ ಮಾಡಲಾಗುತ್ತಿತ್ತು.ದೇವಿಯ ಕಳಸ ಮೆರವಣಿಗೆಯಲ್ಲಿ ಸಾಗದೆ ಬೀಳುತ್ತಿತ್ತು. ದೇವಿ ಗುಡಿಯಲ್ಲಿ ಹೂವಿನ ಪ್ರಸಾದ ಕೇಳಿದರೆ ಅಶುಭವಾಗುತ್ತಿತ್ತು. ಇಂತಹ ನೂರೆಂಟು ವಿಘ್ನಗಳಿಂದ ಗ್ರಾಮಸ್ಥರು ಬೇಸತ್ತಿದ್ದರು. ಅಂತಿಮವಾಗಿ ಓರ್ವ ಮಹಿಳೆ ಮೇಲಿ ದೇವಿ ಅವಾಹನೆಯಾಗಿ ದೇಗುಲ ಉದ್ಘಾಟನೆಯಾದ 12ನೇ ದಿನಕ್ಕೆ ಕಪ್ಪು ಮೇಕೆ ಬಲಿ ಅರ್ಪಿಸಲು ತಿಳಿಸಿತ್ತು.
ನ.18 ರಿಂದ ದೇಗುಲ ಮರುಸ್ಥಾಪನೆ, ಹೋಮ ಹವನಾದಿ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯುತ್ತಿದ್ದವು. ಒಂದೆರಡು ದಿನಗಳಲ್ಲಿ ಕಾರ್ಯಕ್ರಮ ಸಮಾಪ್ತಿಯಾಗಿ ದೇವಿ ಅಣತಿಯಂತೆ ಕಪ್ಪು ಮೇಕೆ ಬಲಿ ನೀಡಲು ಗ್ರಾಮಸ್ಥರು ಸಜ್ಜಾಗಿದ್ದರು.ಈ ಹರಕೆ ದೇವಿ ಒಪ್ಪಿಸುವ ಮುನ್ನ 9 ನೇ ದಿನವಾದ ಗುರುವಾರ ತಡರಾತ್ರಿ ಕಿಡಿಗೇಡಿಗಳು ಕೋಣವನ್ನು ಕಡಿದು ರುಂಡ ಮುಂಡ ಬೇರ್ಪಡಿಸಲಾಗಿದೆ. ಹೇಮಾವತಿ ಹಳೆ ನಾಲೆ ಬಳಿ ಕೋಣ ಕಡಿದು ಮುಂಡ(ದೇಹ)ಗದ್ದೆ ಹಳ್ಳಕ್ಕೆ ಬಿಸಾಡಿ, ರುಂಡ ಹೊತ್ತುಕೊಂಡು ಹೋಗಲಾಗಿದೆ. ಈ ಸ್ಥಳದಲ್ಲಿ ಜೊತೆಗೆ ಅರಿಷಿಣ, ಕುಂಕುಮ, ಕುಡಿಕೆ, ರಕ್ತ, ವಾಮಾಚಾರಕ್ಕೆ ಬೇಕಾದ ರಂಗೋಲಿಯಂತಹ ವಿವಿಧ ವಸ್ತು ಬಿಸಾಡಲಾಗಿದೆ. ಶುಕ್ರವಾರ ರೈತರು ಜಮೀನಿಗೆ ತೆರಳುವಾಗ ಈ ಘಟನೆ ಕಂಡು ಬೆಚ್ಚಿ ಬಿದ್ದಿದ್ದಾರೆ.
ವಿಷಯವನ್ನುಗ್ರಾಮಸ್ಥರಿಗೆ ಮುಟ್ಟಿಸಿದ್ದು, ಯಾರೋ ಕಿಡಿಗೇಡಿಗಳು ಕೃತ್ಯ ನಡೆಸಿದ್ದಾರೆ. ಅರ್ಚಕರಲ್ಲಿ ಪರಿಹಾರ ಕೇಳಿದಾಗ ದೇವಿ ಮರು ಪ್ರತಿಷ್ಠಾಪನೆಗೆ ಹೋಮ, ಹವನಾದಿಗಳು ಕಟ್ಟುನಿಟ್ಟಿನಲ್ಲಿ ಮತ್ತೊಮ್ಮೆ ನಡೆಯಬೇಕಿದೆ ಎಂದು ತಿಳಿಸಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.ಕೋಣ ಬಲಿ ಕೊಟ್ಟ ಕಿಡಿಗೇಡಿ ಪತ್ತೆಗಾಗಿ ಕಿಕ್ಕೇರಿ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಈ ವೇಳೆ ಅಣ್ಣೇಗೌಡ, ತೋಪೇಗೌಡ, ರವಿ, ಸತೀಶ್, ಮಹದೇವು, ಮಂಜೇಗೌಡ, ನಂಜೇಗೌಡ, ವೆಂಕಟೇಶ್, ಅಪ್ಪಣ್ಣಿ, ಬಸವರಾಜು ಮತ್ತಿತರರಿದ್ದರು.