ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಗುರುಗಳು ಹೇಳಿದ ಪಾಠವನ್ನು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಯಮಕನಮರಡಿಯ ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೊಳ್ಳ ಮಠದ ಉತ್ತರಾಧಿಕಾರಿ ಸಿದ್ದಬಸವ ದೇವರು ನುಡಿದರು.ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮಿನ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯೆ ಎಂಬ ಪದದ ಅರ್ಥವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಛಲವೊಂದಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಕಾಯಕತತ್ವ ಸಮಾನತೆಯ ಹಕ್ಕು ಬೋಧಿಸಿದ ಬಸವಣ್ಣನವರ ಸಂದೇಶಗಳು ಇಡೀ ಜಗತ್ತಿನಲ್ಲಿ ಉತ್ತಮವಾಗಿದೆ ಎಂದರು.
ಮಜಲಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯ ಪಾಲಕ ಬಾಳಪ್ಪ ಮಗದುಮ್ಮ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವಕೊಡುವುದನ್ನು ಕಲಿಯಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ಹಾಳಾದರೇ ತಮ್ಮಜೀವನವೇ ವ್ಯರ್ಥವಾದಂತೆ. ತಮ್ಮ ಭವಿಷ್ಯಕ್ಕೆ ಜೀವನವನ್ನು ಅರ್ಥ ಮಾಡಿಕೊಂಡು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಬೇರೆ ಬೇರೆ ಕೋರ್ಸ್‌ಗಳನ್ನು ಜಾರಿಗೊಳಿಸುವ ಚಿಂತನೆ ಇದೆ ಎಂದರು. ಬಸವೇಶ್ವರ ಕಾಲೇಜಿನ ಇತಿಹಾಸ ಉಪನ್ಯಾಸಕ ಆರ್.ಪಿ.ನಾಯಿಕ, ಅರ್ಥಶಾಸ್ತ್ರ ಉಪನ್ಯಾಸಕ ಎ.ವೈ.ಸೋನ್ಯಾಗೋಳ ಮಾತನಾಡಿದರು.ವಿದ್ಯಾರ್ಥಿಗಳಾದ ಅಪ್ಪಯ್ಯ ಹೊಳೆನ್ನವರ, ಪ್ರಿಯಂಕಾ ಕಬಾಡಗಿ, ಸತ್ಯಪ್ಪ ಅಡಕಿ ಪೂಜೇರಿ, ಉಪನ್ಯಾಸಕ ಆರ್.ಎಸ್.ಹಿರೇಮಠ ಅನಿಸಿಕೆ ವ್ಯಕ್ತಪಡಿಸಿದರು. ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಮಹೇಶ ಅಂಗಡಿ ಹಿತನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಸಿದ್ದಪ್ಪ ದುರ್ಗಪ್ಪ ಹೊಸಮನಿ, ಮಹಾವಿದ್ಯಾಲಯದ ಭೋದಕ, ಭೋದಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಎಸ್.ಕೆ.ಜಕ್ಕಾನಟ್ಟಿ ಪರಿಚಯಿಸಿದರು. ಎಸ್.ಟಿ.ವಡ್ಡರ ಸತ್ಕರಿಸಿದರು. ಪತ್ರಕರ್ತ ಎ.ಎಂ ಕರ್ನಾಚಿ ಇದ್ದರು. ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯರು ಸ್ವಾಗತಿಸಿದರು. ದಾನೇಶ್ವರಿ ಕಾನೋಜಿ ಹಾಗೂ ಕಲಾವತಿ ಸಾರಾಪೂರೆ ಜಂಟಿಯಾಗಿ ಸ್ವಾಗತ ಭಾಷಣ ಹಾಗೂ ಪುಷ್ಪಾರ್ಪಣೆ ನಿರ್ವಹಿಸಿದರು. ರಾಧಾ ಕೆಂಪಣ್ಣವರ ವಂದಿಸಿದರು. ಭಾಗ್ಯಶ್ರೀ ಗೂಳಪ್ಪಗೋಳ, ದರ್ಶಿನಿ ಕಿಳ್ಳಿಕೇತರ ನಿರೂಪಿಸಿದರು.