ಡಿಸಿ ಕಚೇರಿ ಬಳಿ ಪ್ರತಿಭಟನೆ ನಿಷೇಧ ಹಿಂಪಡೆಯಿರಿ

| Published : Sep 11 2024, 01:08 AM IST

ಸಾರಾಂಶ

ರಾಮನಗರ: ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸುತ್ತಲಿನ ಪ್ರದೇಶದಲ್ಲಿ ಪ್ರತಿಭಟನೆ, ಧರಣಿ, ಸತ್ಯಾಗ್ರಹ ನಡೆಸದಂತೆ ಜಿಲ್ಲಾಧಿಕಾರಿ ಹೊರಡಿಸಿರುವ ನಿಷೇಧಾಜ್ಞೆ ಆದೇಶವನ್ನು ಹಿಂಪಡೆಯುವಂತೆ ಹಾಗೂ ರೈತರ ೩೨ ಬೇಡಿಕೆಗಳನ್ನು ಈಡೇರಿಸುವಂತೆ ರೈತಸಂಘ, ಕನ್ನಡಪರ ಸಂಘಟನೆ ಹಾಗೂ ದಲಿತಪರ ಸಂಘಟನೆಗಳ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ರಾಮನಗರ: ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸುತ್ತಲಿನ ಪ್ರದೇಶದಲ್ಲಿ ಪ್ರತಿಭಟನೆ, ಧರಣಿ, ಸತ್ಯಾಗ್ರಹ ನಡೆಸದಂತೆ ಜಿಲ್ಲಾಧಿಕಾರಿ ಹೊರಡಿಸಿರುವ ನಿಷೇಧಾಜ್ಞೆ ಆದೇಶವನ್ನು ಹಿಂಪಡೆಯುವಂತೆ ಹಾಗೂ ರೈತರ ೩೨ ಬೇಡಿಕೆಗಳನ್ನು ಈಡೇರಿಸುವಂತೆ ರೈತಸಂಘ, ಕನ್ನಡಪರ ಸಂಘಟನೆ ಹಾಗೂ ದಲಿತಪರ ಸಂಘಟನೆಗಳ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಮಂಗಳವಾರ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ನಿಯೋಗ, ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ನಡೆದ ಘಟನೆಗಳನ್ನು ವಿವರಿಸುವ ಜತೆಗೆ ಹಲವು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿತು.

ಈ ವೇಳೆ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರ ರೈತರ ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ರೈತರ ನ್ಯಾಯಯುತ ಬೇಡಿಕೆಗಳ ಬಗ್ಗೆ ಸಭೆ ನಡೆಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರವೇ(ಪ್ರವೀಣ್ ಶೆಟ್ಟಿಬಣ)ಜಿಲ್ಲಾಧ್ಯಕ್ಷ ರಾಜು ಎಂಎನ್‌ಆರ್ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಸುತ್ತಲಿನ ಪ್ರದೇಶದಲ್ಲಿ ಚಳವಳಿಗಳಿಗೆ ನಿಷೇಧ ಹೇರುವ ಮೂಲಕ ಜಿಲ್ಲಾಧಿಕಾರಿ ಹೋರಾಟ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಹಳ ಹಿಂದಿನಿಂದ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಶಾಂತಿಯುತ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಈ ಹಿಂದೆಯು ಯಾವ ಜಿಲ್ಲಾಧಿಕಾರಿ ತೆಗೆದುಕೊಳ್ಳದ ನಿರ್ಧಾರವನ್ನು ಈ ಜಿಲ್ಲಾಧಿಕಾರಿ ಜಿಲ್ಲೆಗೆ ಆಗಮಿಸಿದ ಕೆಲವೇ ದಿನದಲ್ಲಿ ತೆಗೆದುಕೊಂಡಿದ್ದಾರೆ. ಈ ಕೂಡಲೇ ಈ ಆದೇಶವನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಇದನ್ನು ನಿಯಂತ್ರಣ ಮಾಡಲು ಆಗದ ಅಧಿಕಾರಿಗಳು, ಹೋರಾಟಗಾರನ್ನು ಕಚೇರಿ ಒಳಗೆ ಬಾರದಂತೆ ತಡೆಯುವ ಸಲುವಾಗಿ ಈ ರೀತಿಯ ಷಡ್ಯಂತ್ರ ರೂಪಿಸಿದ್ದಾರೆ. ಈ ಕೂಡಲೇ ಅವರ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು. ನಿಗದಿತ ಸಮಯದೊಳಗೆ ಈ ಆದೇಶ ವಾಪಸ್‌ ಪಡೆಯದಿದ್ದರೆ, ಜಿಲ್ಲಾಡಳಿತದ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲರು ಮಾತನಾಡಿ, ಸೋಮವಾರ ನಡೆದ ಚಳವಳಿ ಸಂದರ್ಭದಲ್ಲಿ ನೈಸರ್ಗಿಕ ಕ್ರಿಯೆಗೆ ಬೇಡಿಕೆ ಸಲ್ಲಿಸಿದ ಮಹಿಳೆಯರ ಮೇಲೆ ಉದ್ಧಟತನದಿಂದ ಅವಹೇಳನಕಾರಿಯಾಗಿ ವರ್ತಿಸಿದ ಡಿವೈಎಸ್‌ಪಿ ದಿನಕರ್ ಶೆಟ್ಟಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಈ ಕೂಡಲೇ ಜಿಲ್ಲೆಯಿಂದ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ನಿಯೋಗದಲ್ಲಿ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಮಲ್ಲಯ್ಯ, ಸಂಚಾಲಕ ಚೀಲೂರು ಮುನಿರಾಜು, ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಕರವೇ ಸ್ವಾಭಿಮಾನಿ ಬಣದ ರಾಜ್ಯ ಉಸ್ತುವಾರಿ ಶಿವುಗೌಡ, ಕೆಆರ್‌ಎಸ್ ಮುಖಂಡ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್, ಕರವೇ ಕಾರ್ಯಧ್ಯಕ್ಷ ಲೋಕೇಶ್ ಆರ್.ಬಿ.ಎಲ್, ರೈತಸಂಘದ ಚಂದ್ರು ಇತರರು ಇದ್ದರು.

ಕೋಟ್‌......

ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿಭಟನೆಗಳಿಗೆ ವಿಧಿಸಿರುವ ನಿಷೇಧಾಜ್ಞೆಯ ಬಗ್ಗೆ ಚರ್ಚಿಸಿ ವಾಪಸ್ ಪಡೆಯುವಂತೆ ಸೂಕ್ತ ನಿರ್ದೇಶನ ನೀಡುತ್ತೇನೆ. ೧೫ ದಿನಗಳ ಒಳಗಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು. ರೈತ ನಾಯಕರ ಸಭೆ ಆಯೋಜಿಸಿ ರೈತರ ೩೨ ಬೇಡಿಕೆಗಳನ್ನು ಹಾಗೂ ಸಾಧಕ ಬಾಧಕಗಳ ಬಗ್ಗೆ ವರದಿ ಪಡೆದು ಪರಿಹಾರ ಒದಗಿಸಲಾಗುತ್ತದೆ.

-ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ, ರಾಮನಗರ

ಪೊಟೋ೧೦ಸಿಪಿಟಿ೧: ರಾಮನಗರದ ವಿವಿಧ ಸಂಘಟನೆಗಳ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಭೇಟಿ ಮಾಡಿ ಮನವಿ ಸಲ್ಲಿಸಿತು.