ಸಾರಾಂಶ
ಪೊಲೀಸರಿಗೆ ಮನವಿ ಪತ್ರ । ವಿಎಚ್‌ಪಿ ಮುಖಂಡ ವಿರುದ್ಧ ಆರೋಪ
ಕನ್ನಡಪ್ರಭ ವಾರ್ತೆ ಸಕಲೇಶಪುರಮಂಗಳೂರಿನ ವಿಎಚ್‌ಪಿ ಮುಖಂಡ ಶರಣ್ ಪಂಪವೆಲ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು.ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಯನ್ನು ವಿನಾಕಾರಣ ಅಮಾನತ್ತು ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಹಿಂದೂ ಪರ ಸಂಘಟನೆಗಳ ವತಿಯಿಂದ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಲಾಯಿತು. ಬಳಿಕ ಠಾಣೆಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಹಿಂದೂ ಮುಖಂಡ ರಘು ಮಾತನಾಡಿ, ‘ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಪಾಲಿಸಲು ಬಿಡದೆ ರಾಜಕೀಯ ಒತ್ತಡ ಹೇರಿ ಪೊಲೀಸ್ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನವನ್ನು ಮಾಡುತ್ತಿದೆ. ವಿನಾಕಾರಣ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಮಾನತ್ತಿನ ಶಿಕ್ಷೆ ನೀಡಲಾಗುತ್ತಿರುವುದು ಖಂಡನೀಯ. ಈ ಹಿನ್ನೆಲೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಅವಕಾಶ ಮತ್ತು ವ್ಯವಸ್ಥೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.‘ದಕ್ಷಿಣ ಕನ್ನಡ ಜಿ.ಕಂಕನಾಡಿಯಲ್ಲಿ ಮೇ ೨೪ ರಂದು ಶುಕ್ರವಾರ ರಸ್ತೆ ತಡೆದು ಕೆಲವು ಮುಸ್ಲಿಮರು ನಮಾಜ್ ಮಾಡಿರುವುದು ಕಾನೂನು ಬಾಹಿರವಾಗಿದ್ದು ಪೊಲೀಸ್ ಇಲಾಖೆ ಕೈಗೊಂಡ ಕ್ರಮವನ್ನು ಬಿ ರಿಪೋರ್ಟ್ ಮಾಡಿರುವುದು ಖಂಡನಾರ್ಹ. ಮಂಗಳೂರು ಜನತೆಗೆ ತೊಂದರೆ ಆಗಿದೆ. ನಿಯಮ ಮೀರಿ ದುರುದ್ದೇಶಪೂರ್ವಕವಾಗಿ ರಸ್ತೆ ತಡೆದು ನಮಾಜ್ ಮಾಡಿದ್ದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ವಯ ಖಂಡಿಸಿದ ವಿಎಚ್‌ಪಿ ಮುಖಂಡ ಶರಣ್ ಪಂಪವೆಲ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಸಂವಿಧಾನ ವಿರೋಧಿಯಾಗಿದೆ. ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕು’ ಎಂದು ಹೇಳಿದರು.
‘ದಕ್ಷಿಣ ಕನ್ನಡ ಜಿ ಕದ್ರಿ ಪೂರ್ವ ವಲಯ ಪೋಲಿಸ್ ಠಾಣೆಯ ಇನ್‌ಸ್ಪೆಪೆಕ್ಟರ್ ಸೋಮಶೇಖರ್ ರಸ್ತೆ ಬಂದ್ ಮಾಡಿ ನಮಾಜ್ ಮಾಡಿರುವ ಕೃತ್ಯದ ವಿರುದ್ಧ ಕಾನೂನು ಸುವ್ಯವಸ್ಥೆ ಕಾಪಾಡಲು ಮಾಡಿದ ಕೇಸನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂಬ ಕಾರಣ ನೀಡಿ ಸುದೀರ್ಘ ರಜೆಗೆ ತೆರಳುವಂತೆ ಆದೇಶ ಮಾಡಿರುವುದು ಪ್ರಾಮಾಣಿಕ ಅಧಿಕಾರಿ ಸೋಮಶೇಖರ್ ಅವರಿಗೆ ಅವಮಾನ ಮಾಡಿದಂತಾಗಿದ್ದು ಪೊಲೀಸ್ ಕಾಯ್ದೆ ನಿಯಮ ಉಲ್ಲಂಘನೆ ಆಗಿದೆ. ಈ ಬಗ್ಗೆ ವರದಿ ಪಡೆದು ಸೋಮಶೇಖರ್ ಅವರ ರಜೆ ರದ್ದುಗೊಳಿಸಿ ಕದ್ರಿ ಪೂರ್ವ ವಲಯಕ್ಕೆ ಪುನ: ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.ಮಂಡ್ಯ ಜಿ ಬೆಳ್ಳೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹಾಗೂ ಹಿಂದೆ ಸಕಲೇಶಪುರದಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ಬಸವರಾಜ್ ಚಿಂಚೋಳ್ಳಿ ಅವರನ್ನು ರಾಜಕೀಯ ಒತ್ತಡದಿಂದ ಅಮಾನತು ಮಾಡಿರುವುದು ಖಂಡನೀಯ, ಕೂಡಲೇ ಇವರ ಅಮಾನತನ್ನು ಹಿಂಪಡೆಯಬೇಕು. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗಟ್ಟಿದ್ದು ಮುಸ್ಲಿಂ ತುಷ್ಟೀಕರಣದ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಹಿಂದೂಗಳು ಬದುಕು ದುಸ್ತರವಾಗಿದೆ’ ಎಂದು ದೂರಿದರು.
ಸಂಘಟನೆಯ ಪ್ರಮುಖರಾದ ಪ್ರತಾಪ್ ಪೂಜಾರಿ, ಕೌಶಿಕ್, ಮಂಜು, ದೀಪಕ್, ಪುನೀತ್, ಸುಪ್ರೀತ್, ಅರುಣ, ಆದಿತ್ಯ, ದುಷ್ಯಂತ್ ಗೌಡ, ಇದ್ದರು.