ರಾಜ್ಯಾದ್ಯಂತ ತೀವ್ರ ಬರದಿಂದಾಗಿ ರೈತ ಸಮೂಹ ಕಂಗೆಟ್ಟಿದ್ದು ಕೂಡಲೇ ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

ನವಲಗುಂದ:

ಮಹದಾಯಿ, ಕಳಸಾ-ಬಂಡೂರಿ ನೀರಿಗಾಗಿ ಹೋರಾಟ ಮಾಡಿದ ರೈತ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯ ಸರ್ಕಾರ ಕೂಡಲೇ ರೈತರ ಸಾಲಮನ್ನಾ ಮಾಡಬೇಕು, ಸಾಲಗಾರರಿಂದ ರೈತರಿಗೆ ಯಾವುದೇ ಕಿರುಕುಳ ಆಗದಂತೆ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಬುಧವಾರ ಬಾಗಲಕೋಟೆಯಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯೆ ಪಟ್ಟಣದಲ್ಲಿರುವ ರೈತರ ಹೋರಾಟ ವೇದಿಕೆಗೆ ಭೇಟಿ ನೀಡಿದ ವೇಳೆ ಮಾತನಾಡಿದರು.

ರಾಜ್ಯಾದ್ಯಂತ ತೀವ್ರ ಬರದಿಂದಾಗಿ ರೈತ ಸಮೂಹ ಕಂಗೆಟ್ಟಿದ್ದು ಕೂಡಲೇ ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. ಇದೇ ವೇಳೆ ರೈತರು ಬರಗಾಲ ಘೋಷಣೆಗೆ ಒತ್ತಾಯಿಸುವಂತೆ ಮನವಿ ಸಲ್ಲಿಸಿದರು. ನಂತರ ಹುತಾತ್ಮ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದರು.

ಮಾಜಿ ಸಚಿವ ಕೆ.ಎನ್. ಗಡ್ಡಿ, ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ಮೌಲಾಸಾಬ್‌ ವೈದ್ಯ, ಶ್ರೀಶೈಲ ಮುಲಿಮನಿ, ಪ್ರಕಾಶ ಅಂಗಡಿ, ಶಿವಶಂಕರ ಕಲ್ಲೂರ, ರೈತ ಹೋರಾಟಗಾರರಾದ ಸುಭಾಷಚಂದ್ರಗೌಡ ಪಾಟೀಲ, ಲೋಕನಾಥ ಹೇಬಸೂರು, ರಘುನಾಥ ನಡುವಿನಮನಿ, ದ್ಯಾಮಣ್ಣ ಹೋನಕುದರಿ, ಅಬ್ಬಾಸ್ ದೇವರಿಡು, ಯಲ್ಲಪ್ಪ ದಾಡಿಬಾವಿ ಸೇರಿ ನೂರಾರು ರೈತರು, ಜೆಡಿಎಸ್ ಪದಾಧಿಕಾರಿಗಳು ಇದ್ದರು.