ಸಾರಾಂಶ
ಸೊರಬ: ದೇಶದ ಬಹುದೊಡ್ಡ ಕಾರ್ಪೊರೇಟ್ ಕಂಪನಿಗಳ ಹಿತ ಕಾಯುವ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ರೈತರು ಮತ್ತು ಜನಸಾಮಾನ್ಯರನ್ನು ವಂಚಿಸಿ ದೇಶದ ಆರ್ಥಿಕ ಬೊಕ್ಕಸಕ್ಕೆ ಅನ್ಯಾಯವೆಸಗುತ್ತಿರುವುದರ ಜತೆಗೆ ರೈತ ಸಮೂಹವನ್ನು ಇನ್ನಷ್ಟು ಬಡವಾಗಿಸುತ್ತಿವೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಂದು ಆರೋಪಿಸಿದರು.ಬುಧವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ಸು ಪಡೆಯುಂತೆ ಮತ್ತು ಬಗರ್‌ಹುಕುಂ ರೈತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರೈತರನ್ನು ನಾಶ ಮಾಡಲು ಹೊರಟಿರುವ ಸರ್ಕಾರ ರೈತರ ಉಳಿವಿಗೆ ಅಗತ್ಯ ತೀರ್ಮಾನ ಕೈಗೊಳ್ಳಬೇಕಾಗಿದೆ. ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಫಲವತ್ತಾದ ಭೂಮಿಯನ್ನು ಮುಟ್ಟುಗೋಲಾಕುವುದನ್ನು ಸಂಪೂರ್ಣವಾಗಿ ಕೈಬಿಡಬೇಕು. ರೈತರು ಹಂಗಾಮಿಯಾಗಿ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಭೂಮಿಯನ್ನು ಕೂಡಲೇ ಮಂಜೂರು ಮಾಡಬೇಕು. ರೈತರ ಒಕ್ಕಲೆಬ್ಬಿಸುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದ ಅವರು, ಇದು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಮೇಲೆ ಕೇಂದ್ರ ಮತ್ತು ಸರ್ಕಾರಗಳು ಸರ್ವಾಧಿಕಾರ ಧೋರಣೆ ಪ್ರದರ್ಶಿಸುತ್ತಿದೆ. ರೈತರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿವೆ. ರಾಷ್ಟ್ರದಲ್ಲಿರುವ ಒಟ್ಟು ರೈತರು ತಿರುಗಿ ಬಿದ್ದರೆ ಸರ್ಕಾರವನ್ನೇ ಬುಡಮೇಲು ಮಾಡುವ ತಾಕತ್ತು ರೈತರಿಗಿದೆ. ಆದ್ದರಿಂದ ರೈತರನ್ನು ರೈತತನದಿಂದ ಹೊರದಬ್ಬುವ ನೀಚತನವನ್ನು ಬಿಟ್ಟು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆದು ರೈತರ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಆಗ್ರಹಿಸಿದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್ ಪಾಟೀಲ್ ಮಾತನಾಡಿ, ರೈತರ ಜೊತೆ ನಾವಿದ್ದೇವೆ ಎಂದು ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಭರವಸೆಗಳನ್ನು ಹುಸಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಜೀವನೋಪಾಯಕ್ಕಾಗಿ ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ಮಾಡಿದ್ದ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಇಳಿದಿದೆ. ಇದನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಅರಣ್ಯ ಭೂಮಿ ಸಾಗುವಳಿಗೆ ಹಕ್ಕುಪತ್ರ ನೀಡಬೇಕು. ಅರಣ್ಯ ಇಲಾಖೆ ಸಾಗುವಳಿದಾರರ ಮೇಲೆ ಹಾಕಿದ ಪೊಲೀಸ್ ಮೊಕದ್ದಮೆ ವಾಪಸ್ ಪಡೆಯಬೇಕು. ರೈತರ ವಿದ್ಯುತ್ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವ ನೀತಿಯನ್ನು ಕೈಬಿಡಬೇಕು ಹಾಗೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತ್ರೀ ಫೇಸ್ ವಿದ್ಯುತ್ ೧೨ ಗಂಟೆ ಹಗಲು ವೇಳೆಯಲ್ಲಿ ನೀಡಬೇಕು ಮತ್ತು ಟ್ರಾನ್ಸ್ಫಾರ್ಮರ್ ಸುಟ್ಟು ೨೪ ಗಂಟೆಯೊಳಗೆ ಅಳವಡಿಸಬೇಕು ಎಂದು ಒತ್ತಾಯಿಸಿರು.ಇದಕ್ಕೂ ಮೊದಲು ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎನ್.ಕೆ.ಮಂಜುನಾಥಗೌಡ ನಿಸರಾಣಿ, ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾಧ್ಯಕ್ಷ ಮಂಜುನಾಥ ಆರೇಕೊಪ್ಪ, ತಾಲೂಕು ಯುವ ಘಟಕದ ಅಧ್ಯಕ್ಷ ಸುಭಾಶ್ ಜಿರಲೆಕೊಪ್ಪ, ಡಾ.ಎಚ್.ಇ.ಜ್ಞಾನೇಶ್, ಹುಚ್ಚಪ್ಪ ತಳೇಬೈಲು, ಪರಮೇಶ ಉಳವಿ, ಹಿರಿಯಣ್ಣ ಶಿಗ್ಗಾ, ಚಂದ್ರೇಗೌಡ ಗಿಣಿವಾಲ, ಯೋಗೇಶ್ ಕುಂದಗಸವಿ, ಮಹೇಶ್ ಸಂಪಗೋಡು ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
;Resize=(128,128))
;Resize=(128,128))