ಶಿಕ್ಷಣಾಧಿಕಾರಿ, ಶಿಕ್ಷಕರಿಗೆ ನೀಡಿದ ನೋಟಿಸ್‌ ವಾಪಸ್‌ ಪಡೆಯಿರಿ: ಎಂಎಲ್‌ಸಿ ಭೋಜೇ ಗೌಡ

| Published : Oct 08 2025, 01:01 AM IST

ಶಿಕ್ಷಣಾಧಿಕಾರಿ, ಶಿಕ್ಷಕರಿಗೆ ನೀಡಿದ ನೋಟಿಸ್‌ ವಾಪಸ್‌ ಪಡೆಯಿರಿ: ಎಂಎಲ್‌ಸಿ ಭೋಜೇ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಗಣತಿ ಪೂರ್ಣಗೊಳಿಸಿದ ಸ್ಥಳಗಳನ್ನು ಪಟ್ಟಿಯಿಂದ ತೆಗೆದುಹಾಕಿ ಸಮರ್ಪಕ ಗಣತಿಗೆ ಅವಕಾಶ ಮಾಡಿಕೊಡಬೇಕು ಎಂದು ದ.ಕ. ಜಿಲ್ಲಾಡಳಿತವನ್ನು ವಿಧಾನ ಪರಿಷತ್‌ ಸದಸ್ಯ ಭೋಜೇ ಗೌಡ ಒತ್ತಾಯಿಸಿದ್ದಾರೆ.

ಮಂಗಳೂರು: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಸಂದರ್ಭ ವಿನಾ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರಿಗೆ ನೀಡಲಾದ ನೋಟಿಸ್‌ನ್ನು ವಾಪಸ್‌ ಪಡೆಯಬೇಕು. ಈಗಾಗಲೇ ಗಣತಿ ಪೂರ್ಣಗೊಳಿಸಿದ ಸ್ಥಳಗಳನ್ನು ಪಟ್ಟಿಯಿಂದ ತೆಗೆದುಹಾಕಿ ಸಮರ್ಪಕ ಗಣತಿಗೆ ಅವಕಾಶ ಮಾಡಿಕೊಡಬೇಕು ಎಂದು ದ.ಕ. ಜಿಲ್ಲಾಡಳಿತವನ್ನು ವಿಧಾನ ಪರಿಷತ್‌ ಸದಸ್ಯ ಭೋಜೇ ಗೌಡ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣತಿ ಕಾರ್ಯವನ್ನು ವಿಳಂಬವಾಗಿ ನಡೆಸಲು ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆದೇಶಗಳ ಉಲ್ಲಂಘನೆ: ಯಾವುದೇ ಗಣತಿ ಕಾರ್ಯಗಳಿಗೆ ಶಿಕ್ಷಕರನ್ನು ಬಳಕೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದೇ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕೂಡ ಶಿಕ್ಷಕರನ್ನು ಬಳಕೆ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಇದರ ಹೊರತೂ ದ.ಕ. ಜಿಲ್ಲೆಯಲ್ಲಿ ಯಥೇಚ್ಛವಾಗಿ ಶಿಕ್ಷಕರನ್ನು ಬಳಸಲಾಗುತ್ತಿದೆ. ಶಿಕ್ಷಕರಿಗೆ ಮಧ್ಯರಾತ್ರಿ ಕರೆ ಮಾಡಿ ಹಿರಿಯ ಅಧಿಕಾರಿಗಳು ಜವಾಬ್ದಾರಿ ಹಂಚಿಕೆ ಮಾಡುತ್ತಿದ್ದಾರೆ. ನಸುಕಿನ ಜಾವ 6 ಗಂಟೆಗೆ ಕರೆ ಮಾಡಿ ಗಣತಿಗೆ ಮೊಬೈಲ್‌ನಲ್ಲಿ ಲಾಗಿನ್‌ ಆಗುವಂತೆ ಒತ್ತಡ ಹೇರುತ್ತಿದ್ದಾರೆ. ಗಣತಿ ಪೂರ್ಣಗೊಂಡ ಮನೆಗಳ ಪಟ್ಟಿಯನ್ನು ಅಳಿಸಿ ಹಾಕದೆ ಪದೇ ಪದೇ ಅದನ್ನೇ ಸೇರಿಸಿ ನೀಡುವುದರಿಂದ ಗಣತಿದಾರರು ಮತ್ತೆ ಅದೇ ಮನೆಗಳಿಗೆ ಹೋಗಿ ಬರುವಂತಾಗಿದೆ. ಗೂಗಲ್ ಮ್ಯಾಪ್‌ ಕೂಡ ಅಸಮರ್ಪಕವಾಗಿ ನಮೂದಾಗುತ್ತಿದ್ದು, ಸೂಚಿಸಿದ ಮನೆಗಿಂತ ಅಧಿಕ ಮನೆಗಳನ್ನು ತೋರಿಸುತ್ತಿದೆ. ಹೀಗಾಗಿ ಈ ಗಣತಿ ಕಾರ್ಯ ಅಸಮರ್ಪಕವಾಗಿದ್ದು, ಅವೈಜ್ಞಾನಿಕದಿಂದ ಕೂಡಿದೆ ಎಂದು ಭೋಜೇ ಗೌಡ ಆರೋಪಿಸಿದರು.

ಜಿಲ್ಲಾಡಳಿತ ವಿಳಂಬ ತೀರ್ಮಾನ: ಅ. 27 ರಿಂದ ಜಾತಿ ಗಣತಿ ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಮಂಗಳೂರಲ್ಲಿ ಜಿಲ್ಲಾಡಳಿತ ಸಮೀಕ್ಷಾ ಮೇಲ್ವಿಚಾರಕರನ್ನು ಒಂದು ವಾರ ವಿಳಂಬವಾಗಿ ನೇಮಕ ಮಾಡಿದೆ. ಈಗ ಕಂದಾಯ ಹಾಗೂ ಇನ್ನಿತರ ಇಲಾಖೆಗಳ ಹೊರತು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರನ್ನೂ ಗಣತಿ ಕಾರ್ಯಕ್ಕೆ ಸೇರ್ಪಡೆಗೊಳಿಸಲಾಗಿದೆ. ಆದರೂ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳುವ ಸೂಚನೆ ಕಾಣಿಸುತ್ತಿಲ್ಲ. ವಿನಾ ಕಾರಣ ಗೊಂದಲಗಳನ್ನು ಹುಟ್ಟುಹಾಕುವ ಮೂಲಕ ಜಿಲ್ಲಾಡಳಿತ ಗಣತಿ ಪ್ರಕ್ರಿಯೆಯನ್ನು ಆರಂಭದಿಂದಲೇ ಗಂಭೀರವಾಗಿ ಪರಿಗಣಿಸದಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ಹಾಗಾಗಿ ಇದಕ್ಕೆ ಕಾರಣಕರ್ತ ಹೆಚ್ಚುವರಿ ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಭೋಜೇ ಗೌಡ ಹೇಳಿದರು.

ಡಿಸಿ, ಎಡಿಸಿಗೆ ಭೋಜೇಗೌಡ ತರಾಟೆ

ಸುದ್ದಿಗೋಷ್ಠಿ ನಡೆಸಿದ ಬಳಿಕ ವಿಧಾನ ಪರಿಷತ್‌ ಸದಸ್ಯ ಭೋಜೇ ಗೌಡರು ನೇರವಾಗಿ ಜಿಲ್ಲಾಧಿಕಾರಿಗಳ ಚೇಂಬರ್‌ಗೆ ತೆರಳಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ನಡೆಯಿತು. ಜಾತಿ ಗಣತಿ ವಿಳಂಬ, ಶಿಕ್ಷಕರನ್ನು ಸತಾಯಿಸುವುದು ಸೇರಿದಂತೆ ಗಣತಿದಾರರಿಗೆ ಜಿಲ್ಲಾಡಳಿತ ಕಿರುಕುಳ ನೀಡುತ್ತಿದೆ ಇತ್ಯಾದಿ ಗಂಭೀರ ಆರೋಪಗಳ ಬಗ್ಗೆ ಡಿಸಿ ಹಾಗೂ ಎಡಿಸಿ ಜೊತೆ ಅರ್ಧ ಗಂಟೆಯೂ ಹೆಚ್ಚುಕಾಲ ಭೋಜೇ ಗೌಡ ಮಾತುಕತೆ ನಡೆಸಿದರು. ಈ ವೇಳೆ ಎಡಿಸಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾಗಿ ಅವರು ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನೀಡಿದ ನೋಟಿಸ್‌ ಮೇಲೆ ಕ್ರಮ ಕೈಗೊಂಡರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು. ಇದನ್ನು ಸರ್ಕಾರದ ಮಟ್ಟದಲ್ಲೂ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸುವುದಾಗಿ ಭೋಜೇ ಗೌಡ ಹೇಳಿದರು. ಗಣತಿ ಪೂರ್ಣಗೊಂಡವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಮಾತುಕತೆ ಬಳಿಕ ಜಿಲ್ಲಾಡಳಿತ ಸಮ್ಮತಿಸಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ ನೋಟಿಸ್‌ ನೀಡಿದರೂ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಜಿಲ್ಲಾಡಳಿತ ಭರವಸೆ ನೀಡಿದೆ.

-ಭೋಜೇ ಗೌಡ, ವಿಧಾನ ಪರಿಷತ್‌ ಸದಸ್ಯ, ನೈಋತ್ಯ ಶಿಕ್ಷಕರ ಕ್ಷೇತ್ರ