ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯಾದ್ಯಂತ ಬಡವರು, ಕೂಲಿ ಕಾರ್ಮಿಕರು ಹಾಗೂ ಸ್ಲಂ ಜನರ ಬಿಪಿಎಲ್ ಕಾರ್ಡ್‌ಗಳನ್ನು ರದ್ಧುಪಡಿಸಿದ ರಾಜ್ಯ ಸರ್ಕಾರದ ಜನವಿರೋಧಿ ಕ್ರಮ ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟಿಸಲಾಯಿತು.ನಗರದ ಜಿಲ್ಲಾಡಳಿತ ಭವನ ಎದುರು ಉಭಯ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಿದ ಬಡವರು, ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಎಂ.ಆನಂದಪ್ಪ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಜಾರಿಗೆ ತಂದಿದೆ. ಗೃಹಲಕ್ಷ್ಮಿಯಡಿ ರಾಜ್ಯದ 1.25 ಕೋಟಿ ಗೃಹಿಣಿಯರಿಗೆ ತಲಾ ₹2 ಸಾವಿರದಂತೆ ವಾರ್ಷಿಕ ಒಟ್ಟು ₹28,608 ಕೋಟಿಗಳನ್ನು ಪ್ರಸಕ್ತ 2025-26ನೇ ಸಾಲಿಗೆ ಮೀಸಲಿಡಲಾಗಿದೆ. ಬಡಕುಟುಂಬದ ಯಾರೂ ಉಪವಾಸ ಇರಬಾರದೆಂದು ಹಸಿವು ಮುಕ್ತ ಕರ್ನಾಟಕದ ಘೋಷಣೆಯೊಂದಿಗೆ ಅನ್ನಭಾಗ್ಯ ಜಾರಿಗೆ ತಂದಿದೆ. ಹೀಗಿದ್ದರೂ ಈಗ ಬಿಪಿಎಲ್ ಕಾರ್ಡ್‌ಗಳ ರದ್ದುಪಡಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಲಕ್ಷಾಂತರ ಕುಟುಂಬಕ್ಕೆ ಅಂತ್ಯೋದಯ, ಬಿಪಿಎಲ್ ಕುಟುಂಬಕ್ಕೆ ಉಚಿತ ಆಹಾರ ಧಾನ್ಯ ವಿತರಿಸಲಾಗುತ್ತದೆ. ಆದರೆ, ಸರ್ಕಾರ ಇದೀಗ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಾದ್ಯಂತ 8 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ರದ್ದುಪಡಿಸಿದೆ. ರಾಜ್ಯದ ಲಕ್ಷಾಂತರ ಕೂಲಿ ಕಾರ್ಮಿಕರು, ಸ್ಲಂ ನಿವಾಸಿಗಳಿಗೆ ಆಹಾರ ಸಿಗದೇ, ಬೀದಿಗೆ ಬರುವಂತಾಗಿದೆ. ಉಳ್ಳವರ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ರದ್ದುಪಡಿಸಲಿ. ಅಧಿಕಾರಿಗಳು ಯಾವುದೇ ಸಮೀಕ್ಷೆ ನಡೆಸದೇ, ಮುಂಚಿತವಾಗಿ ಫಲಾನುಭವಿಗಳಿಗೆ ನೋಟಿಸ್ ಸಹ ನೀಡದೇ, ಪಡಿತರ ಅಂಗಡಿಗಳ ಮುಂದೆ ರದ್ದುಪಡಿಸಿದ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.
ಸರ್ಕಾರದ ಕ್ರಮ ಲಕ್ಷಾಂತರ ಕುಟುಂಬಗಳನ್ನು ಪಂಚ ಗ್ಯಾರಂಟಿಯಿಂದ ವಂಚಿಸುವ ಹುನ್ನಾರವಾಗಿದೆ. ಬಿಪಿಎಲ್ ಕಾರ್ಡ್ ರದ್ದುಪಡಿಸುವ ಹಾಗೂ ಬಿಪಿಎಲ್ ಕಾರ್ಡ್‌ಗಳಿಂದ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿ ಮೂಲಕ ಸಬ್ಸಿಡಿಯಲ್ಲಿ ಆಹಾರ ಧಾನ್ಯ ಪಡೆಯಲು ಅದೇ ಕಡ್ಡಾಯ ದಾಖಲೆಯಾಗಿದೆ ಎಂದು ಹೇಳಿದರು.ಸ್ಥಳೀಯ ನಿವಾಸಿ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಸತಿ ಯೋಜನೆ, ಆರೋಗ್ಯ, ಶೈಕ್ಷಣಿಕ ಯೋಜನೆ ಸೇರಿದಂತೆ ಸರ್ಕಾರದ ಸೌಲಭ್ಯ, ಯೋಜನೆ ಪಡೆಯಲು ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯೇ ಗುರುತಿನ ಪುರಾವೆ ಆಗಿರುತ್ತವೆ. ಕಾರ್ಡ್‌ಗಳ ರದ್ದು ಕ್ರಮ ಶೀಘ್ರ ಹಿಂಪಡೆಯಬೇಕು. ಇಲ್ಲವಾದರೆ ಚಳಿಗಾಲದ ಅಧಿವೇಶನದ ವೇಳೆ ಬೆಳಗಾವಿ ಚಲೋ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಸಂಘಟನೆಯ ರೇಣುಕಾ ಯಲ್ಲಮ್ಮ ಇತರರು ಇದ್ದರು.