ಅಗತ್ಯ ವಸ್ತುಗಳು ಹಾಗೂ ರಸಗೊಬ್ಬರಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ರೈತರಿಗೆ ಮಾಹಿತಿ ಇಲ್ಲದೆ ೨ ರು. ಹಾಲಿನ ಬೆಲೆ ಖಡಿತ ಮಾಡಿರುವ ಆದೇಶ ವಾಪಸು ಪಡೆಯಬೇಕು. ಒಕ್ಕೂಟದಲ್ಲಿ ರೈತರ ಹೆಸರಿನಲ್ಲಿ ನೂರಾರು ಕೋಟಿ ಹಗರಣ ಸಿ.ಬಿ.ಐಗೆ ಒಪ್ಪಿಸಬೇಕೆಂದು ರೈತ ಸಂಘದಿಂದ ಸಗಣಿ ಹಾಗೂ ಪೊರಕೆಗಳ ಸಮೇತ ಉಪ ವ್ಯವಸ್ಥಾಪಕರ ಕಚೇರಿ ಮುಂದೆ ಹೋರಾಟ ಮಾಡಿ ಮನವಿ

ಕನ್ನಡಪ್ರಭ ವಾರ್ತೆ ಮುಳಬಾಗಿಲು

ಅಗತ್ಯ ವಸ್ತುಗಳು ಹಾಗೂ ರಸಗೊಬ್ಬರಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ರೈತರಿಗೆ ಮಾಹಿತಿ ಇಲ್ಲದೆ ೨ ರು. ಹಾಲಿನ ಬೆಲೆ ಖಡಿತ ಮಾಡಿರುವ ಆದೇಶ ವಾಪಸು ಪಡೆಯಬೇಕು. ಒಕ್ಕೂಟದಲ್ಲಿ ರೈತರ ಹೆಸರಿನಲ್ಲಿ ನೂರಾರು ಕೋಟಿ ಹಗರಣ ಸಿ.ಬಿ.ಐಗೆ ಒಪ್ಪಿಸಬೇಕೆಂದು ರೈತ ಸಂಘದಿಂದ ಸಗಣಿ ಹಾಗೂ ಪೊರಕೆಗಳ ಸಮೇತ ಉಪ ವ್ಯವಸ್ಥಾಪಕರ ಕಚೇರಿ ಮುಂದೆ ಹೋರಾಟ ಮಾಡಿ ಮನವಿ ಸಲ್ಲಿಸಿದರು.

ಮಧ್ಯಪ್ರಾಚ್ಯ ದೇಶಗಳ ಯುದ್ಧದ ನೆಪದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುವ ಜೊತೆಗೆ ಕೃಷಿ ಮುಂಗಾರು ಬಿತ್ತನೆ ಸಮಯದಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಏರಿಕೆ ಮಾಡಿ ದುಡಿಯುವ ಕೈಗೆ ನರೇಗಾದಲ್ಲಿ ಕೆಲಸ ನೀಡದೆ, ಬಡ ರೈತ ಕೂಲಿ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ-ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯಿಂದ ತತ್ತರಿಸಿರುವ ಜನ ಸಾಮಾನ್ಯರ ಬದುಕಿಗೆ ಸ್ವಾಭಿಮಾನದ ಜೀವನ ನೀಡಿರುವ ಹೈನುಗಾರಿಕೆ ನಂಬಿರುವ ಲಕ್ಷಾಂತರ ಗ್ರಾಮೀಣ ಪ್ರದೇಶದ ಮಹಿಳಾ ಕೂಲಿ ಕಾರ್ಮಿಕರ ಜೀವನದ ಜೊತೆ ಹಾಲು ಒಕ್ಕೂಟ ಯಾವುದೇ ಮಾಹಿತಿ ನೀಡದೆ ಏಕಾಏಕಿ ೨ ರು. ಖಡಿತ ಮಾಡುವ ಮುಖಾಂತರ ಬೆಂದಿರುವ ಬಡವರ ಬದುಕನ್ನು ಮತ್ತೆ ಬೆಂಕಿಗೆ ಹಾಕಿ ಸುಡುವ ಮಟ್ಟಕ್ಕೆ ಹಾಲು ಒಕ್ಕೂಟದ ಆಡಳಿತ ಮಂಡಳಿ ನಡೆದುಕೊಳ್ಳುತ್ತಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಒಕ್ಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

೫ ವರ್ಷದಿಂದ ಹಾಲು ಒಕ್ಕೂಟದಲ್ಲಿ ನೂರಾರು ಕೋಟಿ ಹಗರಣ ನಡೆಯುತ್ತಿದೆ. ನೇಮಕಾತಿಯಿಂದ ಹಿಡಿದು ಹಾಲು ಮಾರಾಟ ಕೇಂದ್ರಗಳು ಮತ್ತು ಮಾರುಕಟ್ಟೆ ವ್ಯವಸ್ಥೆ ಹಾಗೂ ಕಚ್ಚಾವಸ್ತುಗಳು ಖರೀದಿ, ನೂತನ ಹಾಲು ಶಿಥಿಲ ಕೇಂದ್ರ ಕಟ್ಟಡ ನಿರ್ಮಾಣದಲ್ಲಿ ಭ್ರಷ್ಟಾಚಾರ ಮತ್ತಿತರ ಎಲ್ಲಾ ಕಾಮಗಾರಿಗಳಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆಂದು ಜನಪ್ರತಿನಿಧಿಗಳೇ ಆರೋಪ ಮಾಡುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಆಡಳಿತ ಮಂಡಳಿ ಯಾವುದೇ ಮಾಹಿತಿ ಇಲ್ಲದೆ, ಪತ್ರಿಕಾ ಹೇಳಿಕೆ ನೀಡದೇ ಏಕಾಏಕಿ ಹಾಲು ದರ ಇಳಿಸಿರುವುದು ನ್ಯಾಯವೇ, ಹಾಲು ಉತ್ಪಾದನೆ ಮಾಡುವ ಉತ್ಪಾದಕರ ಶ್ರಮಕ್ಕೆ ಒಕ್ಕೂಟದಲ್ಲಿ ಬೆಲೆ ಇಲ್ಲವೆ, ಹಾಲು ಒಕ್ಕೂಟ ಯಾರ ಆಸ್ತಿ, ಆಯ್ಕೆಯಾಗಿರುವ ಹೈನೋದ್ಯಮದ ಗಂದಾಗಾಳಿ ಗೊತ್ತಿಲ್ಲದ ಅಕ್ಷರಸ್ಥರಾಗಿದ್ದರೂ, ಅನಕ್ಷರಸ್ಥರಂತೆ ವರ್ತನೆ ಮಾಡುವ ಆಡತಳಿತ ಮಂಡಳಿಗೆ ಬಡವರ ಬೆವರಿನ ಹನಿಯ ಬೆಲೆ ಗೊತ್ತಿಲ್ಲವೆ ಎಂದು ಕಿಡಿಕಾರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪ ವ್ಯವಸ್ಥಾಪಕ ಕಿರಣ್, ನಿಮ್ಮ ರೈತಪರ ಮನವಿ ಹಿರಿಯ ಅಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.

ಹೋರಾಟದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಕ್‌ ಪಾಷ, ಮುಖಂಡರಾದ ಈಕಂಬಳ್ಳಿ ಮಂಜುನಾಥ, ಯಲುವಳ್ಳಿ ಪ್ರಭಾಕರ್, ರಾಜೇಶ್, ನಾಗರಾಜ್, ಜುಬೇರ್ ಪಾಷ ಸುನಿಲ್ ಕುಮಾರ್, ಹೆಬ್ಬಣಿ ಆನಂದರೆಡ್ಡಿ, ಸುಪ್ರೀಂ ಚಲ, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ಧರ್ಮ, ವೇಣು, ಕೇಶವ, ಶಶಿ, ಮುನಿರಾಜು, ಗಿರೀಶ್, ಪುತ್ತೇರಿ ರಾಜು ಇದ್ದರು.