ತಿಂಬೋಲಿ ಗ್ರಾಮದ ನಿವಾಸಿ ಬಬನ್ ನಾರಾಯಣ ಹಣಬರ ಎಂಬುವವರೇ ಬೆಳೆನಾಶ ಮಾಡಿದ ರೈತ.

ಜೋಯಿಡಾ: ತಾಲೂಕಿನಲ್ಲಿ ಮಳೆ ಸರಿಯಾಗಿ ಬೀಳದೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದರಿಂದ ನೊಂದ ರೈತರೊಬ್ಬರು 5 ಎಕರೆ ಭತ್ತದ ಬೆಳೆಯನ್ನು ಟ್ರ್ಯಾಕ್ಟರನಿಂದ ನಾಶಪಡಿಸಿದ್ದಾರೆ. ತಿಂಬೋಲಿ ಗ್ರಾಮದ ನಿವಾಸಿ ಬಬನ್ ನಾರಾಯಣ ಹಣಬರ ಎಂಬುವವರೇ ಬೆಳೆನಾಶ ಮಾಡಿದ ರೈತ. ಅವರು ತಮ್ಮ ಗದ್ದೆಯಲ್ಲಿ ಸಾಲ ಮಾಡಿ ಭತ್ತ ಬೆಳೆದಿದ್ದರು. ಆರಂಭದಲ್ಲಿ ಉತ್ತಮವಾಗಿ ಬಂದಿದ್ದ ಬೆಳೆ, ದಿನ ಕಳೆದಂತೆ ಸೂಕ್ತ ಮಳೆಯಾಗದೇ ಮತ್ತು ನೀರಿನ ಆಸರೆ ಇಲ್ಲದೇ ಗದ್ದೆಯ ಮಣ್ಣು ಸಂಪೂರ್ಣ ಒಣಗಿತ್ತು. ಬತ್ತದ ಸಸಿಗಳು ನೀರಿಲ್ಲದೇ ಕಣ್ಣೆದುರೇ ಒಣಗುತ್ತಿದ್ದುದನ್ನು ಕಂಡು ರೈತ ತೀವ್ರ ಹತಾಶರಾಗಿ, ಚಿಂತಿತರಾಗಿದ್ದರು.ಬೆಳೆ ಸಂಪೂರ್ಣವಾಗಿ ನಾಶವಾಗಿದ್ದರಿಂದ ತೀವ್ರ ಬೇಸರಗೊಂಡ ಬಬನ್ ನಾರಾಯಣ ಹಣಬರ ಅವರು, ಸೋಮವಾರ ಟ್ರ್ಯಾಕ್ಟರ್ ಮೂಲಕ ಇಡೀ ಭತ್ತದ ಬೆಳೆಯನ್ನು ನೆಲಸಮಗೊಳಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬ ಆಕ್ರೋಶ ಮತ್ತು ತೀವ್ರ ನೋವಿನಿಂದ ರೈತ ಈ ನಿರ್ಧಾರಕ್ಕೆ ಬಂದಿದ್ದಾರೆ. ತಾಲೂಕಿನಲ್ಲಿ ಬೆಳೆಹಾನಿಯಿಂದ ಕಂಗಾಲಾಗಿರುವ ಹಲವು ರೈತರು ಇದೇ ರೀತಿ ಬೆಳೆನಾಶ ಮಾಡುತ್ತಿದ್ದಾರೆ.ಬೋಟಿಂಗ್‌ ಉದ್ಯಮ ನಿಯ ಸಡಿಲಿಕೆಗೆ ಆಗ್ರಹ

ಹೊನ್ನಾವರ: ತಾಲೂಕಿನ ಬಿಕಾಸಿ ತಾರಿಯಲ್ಲಿ ನಡೆಯುವ ಶರಾವತಿ ಬ್ಯಾಕ್ ವಾಟರ್ ಬೋಟಿಂಗ್ ಉದ್ಯಮದಲ್ಲಿ ಅಧಿಕೃತ ಮತ್ತು ಅನಧಿಕೃತ ಎನ್ನುವುದಿಲ್ಲ. ಆದರೆ, ಪ್ರಸ್ತುತ ಜಾರಿಯಲ್ಲಿರುವ ಕಠಿಣ ನಿಯಮಾವಳಿಗಳಿಂದಾಗಿ ಸಂಪೂರ್ಣ ದಾಖಲೆಗಳನ್ನು ಒದಗಿಸಿ ಪರವಾನಗಿ ಪಡೆಯಲು ತೊಡಕಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯು ನಿಯಮಾವಳಿಗಳನ್ನು ಸಡಿಲಗೊಳಿಸಿ, ಈ ಮೊದಲಿನಂತೆ ಎಲ್ಲರೂ ಬೋಟಿಂಗ್ ಉದ್ಯಮ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಬೋಟ್ ಮಾಲೀಕರು ಆಗ್ರಹಿಸಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬೋಟ್ ಮಾಲೀಕರಾದ ನಾಗೇಶ್ ಗೌಡ ಅವರು ಮಾತನಾಡಿ, ನಾವೆಲ್ಲಾ ನದಿಯಲ್ಲೇ ಬೆಳೆದು ಅದನ್ನೇ ನಂಬಿಕೊಂಡವರಾಗಿದ್ದೇವೆ. ಶರಾವತಿ ನದಿಯ ಭೌಗೋಳಿಕ ಸ್ಥಿತಿಗತಿ ಅರಿತಿದ್ದೇವೆ. ಪ್ರಸ್ತುತ ಗೋವಾ ಮಾದರಿಯ ಕಠಿಣ ನಿಯಮಗಳನ್ನು ಇಲ್ಲೂ ಹೇರಲಾಗುತ್ತಿದ್ದು, ಇದರಿಂದ ಉದ್ಯಮ ನಡೆಸಲು ತೊಂದರೆಯಾಗಿದೆ ಎಂದರು.ಇಲ್ಲಿನ ನದಿಯಲ್ಲಿ ಇದುವರೆಗೆ ಯಾವುದೇ ಪ್ರವಾಸಿಗರು ಬಿದ್ದು ಅನಾಹುತ ಸಂಭವಿಸಿದ ಉದಾಹರಣೆಗಳಿಲ್ಲ. ಎಲ್ಲರ ಬಳಿ ಇನ್ಶೂರೆನ್ಸ್ ಹಾಗೂ ಸ್ಟೆಬಿಲಿಟಿ(ಸ್ಥಿರತೆ) ಪತ್ರಗಳಿದ್ದರೂ, ಅನಗತ್ಯ ತಾಂತ್ರಿಕ ನಿಯಮಗಳಿಂದ ತೊಂದರೆಯಾಗುತ್ತಿದೆ. ದಾಖಲೆಗಳ ಪರಿಶೀಲನೆ ಮತ್ತು ಪ್ರಕ್ರಿಯೆಗಳಿಗಾಗಿ ಕಾರವಾರದವರೆಗೆ ಅಲೆಯುವ ಬದಲು, ಹೊನ್ನಾವರದ ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ಕಚೇರಿಯ ಹಂತದಲ್ಲೇ ಪ್ರವಾಸೋದ್ಯಮ ಇಲಾಖೆ ವತಿಯಿಂದ ಏಕಗವಾಕ್ಷಿ ಮಾದರಿಯಲ್ಲಿ ಒಂದೇ ದಿನದಲ್ಲಿ ಪ್ರಕ್ರಿಯೆ ಮುಗಿಸಿಕೊಡಲು ವ್ಯವಸ್ಥೆ ಮಾಡಬೇಕು ಎಂದರು.ಸಂದೀಪ ಗೌಡ ಮಾತನಾಡಿ, ಬೋಟ್ ಉದ್ಯಮವನ್ನು ನೆಚ್ಚಿಕೊಂಡು ಹಲವರು ಸಾಲ ಮಾಡಿ ಬೋಟ್ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಸಡಿಲಗೊಳಿಸಿ, ಸಂಪೂರ್ಣ ದಾಖಲೆ ಮಾಡಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಗಜಾನನ ಗೌಡ ಮಾತನಾಡಿದರು. ಬಿಕಾಸಿ ತಾರಿಯ ಶರಾವತಿ ಬ್ಯಾಕ್ ವಾಟರ್ ಬೋಟಿಂಗ್ ಮಾಲೀಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.