ಕೊಯ್ಲು ಕಾರ್ಮಿಕರಿಲ್ಲದೆ ಕಾಳುಮೆಣಸು ಬೆಳೆಗಾರರು ಕಂಗಾಲು

| Published : May 01 2024, 01:29 AM IST

ಕೊಯ್ಲು ಕಾರ್ಮಿಕರಿಲ್ಲದೆ ಕಾಳುಮೆಣಸು ಬೆಳೆಗಾರರು ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕರಿಲ್ಲದೇ ಬೆಳೆಗಾರರು ಕಂಗಾಲಾಗಿದ್ದಾರೆ. ತೋಟಗಳಲ್ಲಿ ಕಾಳು ಮೆಣಸು ಫಸಲು ಕೆಂಬಣ್ಣಕ್ಕೆ ತಿರುಗಿ ಉದುರುತ್ತಿದೆ.

ವಿಘ್ನೇಶ್‌ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಲ್ಲಿ ಕಾಳು ಮೆಣಸು ಕೊಯ್ಲಿನ ಸಮಯವಾಗಿದ್ದು, ಕಾಳು ಮೆಣಸು ಕೊಯ್ಲಿಗೆ ಕಾರ್ಮಿಕರಿಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ. ಇದರಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ಇನ್ನೂ ಕಾಳು ಮೆಣಸು ಕೊಯ್ಲು ಆಗಲಿಲ್ಲ. ತೋಟಗಳಲ್ಲಿ ಕಾಳು ಮೆಣಸು ಫಸಲು ಕೆಂಬಣ್ಣಕ್ಕೆ ತಿರುಗಿ ಉದುರುತ್ತಿವೆ.

ಕಾರ್ಮಿಕರ ಕೊರತೆಗೆ ಸಣ್ಣ ಬೆಳೆಗಾರರು ಮಾತ್ರವಲ್ಲದೆ ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳು ಕೂಡ ಕಂಗಾಲಾಗಿವೆ. ಇದರಿಂದ ಬಳ್ಳಿಯಲ್ಲೇ ಕಾಳು ಮೆಣಸು ಫಸಲು ಹಣ್ಣಾಗುತ್ತಿದೆ. ಹಣ್ಣಾದ ಫಸಲು ಉದುರಿದ ಬಳಿಕ ಮಹಿಳಾ ಕಾರ್ಮಿಕರನ್ನು ಬಳಸಿಕೊಂಡು ಫಸಲು ಹೆಕ್ಕುವ ಕೆಲಸ ಮಾಡಲಾಗುತ್ತಿದೆ. ಆದರೆ ಕೊಯ್ಲಿನ ಕೆಲಸ ಮಾತ್ರ ನಡೆಯುತ್ತಿಲ್ಲ.

ಪ್ರಸ್ತುತ ಕಾಳು ಮೆಣಸಿಗೆ ಕೆ.ಜಿಗೆ 540 ರು. ಬೆಲೆ ದೊರಕುತ್ತಿದೆ. ಆದರೂ ಕೂಡ ಕಾರ್ಮಿಕರಿಲ್ಲದೆ ಕೊಯ್ಲು ಮಾಡಲು ಕೆಲವು ಕಡೆಗಳಲ್ಲಿ ಸಮಸ್ಯೆಯಾಗಿದೆ. ಕಡಿಮೆ ತೋಟಗಳನ್ನು ಹೊಂದಿರುವ ಬೆಳೆಗಾರರು ಕೊಯ್ಲು ಕಾರ್ಯ ಮುಗಿಸಿದ್ದಾರೆ. ಆದರೆ ದೊಡ್ಡ ತೋಟ ಹೊಂದಿರುವ ಬೆಳೆಗಾರರಿಗೆ ಕಾರ್ಮಿಕರು ಸಿಗುತ್ತಿಲ್ಲ.

ಪ್ರತಿ ಬಾರಿ ಕಾಳು ಮೆಣಸು ಫಸಲು ಕೊಯ್ಲಿಗೆ ವಿವಿಧ ರಾಜ್ಯದಿಂದ ವಲಸೆ ಕಾರ್ಮಿಕರು ಹೆಚ್ಚಾಗಿ ಆಗಮಿಸುತ್ತಿದ್ದರು. ತಮಿಳುನಾಡಿನ ಸೇಲಂ ಮೂಲದ ಕಾರ್ಮಿಕರು, ಅಲ್ಲದೆ ಕೇರಳ ಭಾಗದಿಂದಲೂ ಕೂಡ ಕಾರ್ಮಿಕರು ಬರುತ್ತಿದ್ದರು. ಆದರೆ ಈ ಬಾರಿ ಚುನಾವಣಾ ಮತ್ತಿತರ ಕಾರಣಗಳಿಂದಾಗಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಕಾರ್ಮಿಕರು ಆಗಮಿಸಿದ್ದಾರೆ. ಈಗಲೂ ಕೆಲವು ತೋಟಗಳಲ್ಲಿ ಕೊಯ್ಲು ಕೆಲಸ ಮಾಡಲಾಗುತ್ತಿದೆ. ಆದರೆ ಕಾರ್ಮಿಕರ ಕೊರತೆಯಿಂದ ಕೆಲವು ಭಾಗದಲ್ಲಿ ಕಾಳು ಮೆಣಸು ಫಸಲು ಹಾಗೇ ಉಳಿದುಕೊಂಡಿದೆ. ಇದರಿಂದ ಬಂದ ಫಸಲನ್ನು ಕೊಯ್ಲು ಮಾಡಲಾಗದೆ ಉದುರುತ್ತಿದ್ದು, ಕೆಲವು ಬೆಳೆಗಾರರು ಪರಿತಪಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಅಸ್ಸಾಂ ಕಾರ್ಮಿಕರ ಸಂಖ್ಯೆ ಕೂಡ ಇಳಿಮುಖವಾಗಿದೆ. ಚುನಾವಣೆಗೆ ಎಂದು ತೆರಳಿದವರು ಇನ್ನೂ ಕೂಡ ಆಗಮಿಸಿಲ್ಲ. ಇದರಿಂದ ಕಾರ್ಮಿಕರ ಕೊರತೆಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ.

ಕಾಳು ಮೆಣಸು ಕೊಯ್ಲಿನಲ್ಲಿ ಅಲುಮ್ಯೂನಿಯಂ ಏಣಿ ಕಾರ್ಮಿಕರಿಗೆ ಮಾರಕವಾಗಿ ಪರಿಣಮಿಸಿದ್ದು, ಬಹುತೇಕ ಕಾರ್ಮಿಕರು ಕೊಯ್ಲು ಕೆಲಸದಿಂದ ಹಿಂದೆ ಸರಿಯಲು ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಈ ಅಲುಮ್ಯೂನಿಯಂ ಏಣಿ ಬಳಸಿ ಅಸ್ಸಾಂ ಮತ್ತಿತರ ಕಡೆಯ ಕಾರ್ಮಿಕರು ಅಸುನೀಗಿದ್ದಾರೆ. ಇದರಿಂದ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವರೆಗೆ ಸುಮಾರು 20ಕ್ಕೂ ಅಧಿಕ ಮಂದಿ ಏಣಿಯಿಂದ ಮೃತಪಟ್ಟಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ದೊರಕದಿರುವುದು ಕೂಡ ಪ್ರಮುಖ ಕಾರಣವಾಗಿದೆ.

ವೇತನ ಸಮಸ್ಯೆ : ಸ್ಥಳೀಯ ಕಾರ್ಮಿಕರು ಇದ್ದರೂ ಕೂಡ ಕೂಲಿ ವೇತನದ ಸಮಸ್ಯೆಯಿಂದಾಗಿ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಇಲ್ಲಿನ ಸ್ಥಳೀಯ ಕಾರ್ಮಿಕರು ಹಿಂದೇಟು ಹಾಕುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ ಬೆಳೆಗಾರರು ಕೂಡ ಹೆಚ್ಚಿನ ವೇತನ ನೀಡಲು ಅಸಾಧ್ಯವಾಗಿದೆ. ಕಾರ್ಮಿಕರನ್ನು ಕರೆದುಕೊಂಡು ಬರುವ ಏಜೆಂಟ್ ಗಳಿಗೂ ಕೂಡ ಹಣ ಕೊಡಬೇಕು, ಜೀಪುಗಳಿಗೂ ಕೂಡ ಬಾಡಿಕೆ ಹಣ ನೀಡಬೇಕು. ಇದರಿಂದ ದುಪ್ಪಟ್ಟು ದರ ತಗಲುತ್ತಿರುವ ಪರಿಣಾಮ ಬೆಳೆಗಾರರು ಕೂಡ ಏನು ಮಾಡಲಾಗದ ಪರಿಸ್ಥಿತಿಗೆ ಒಳಗಾಗಿದ್ದಾರೆ. ಇತ್ತೀಚೆಗೆ ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆ ಉಲ್ಭಣಿಸಿದೆ. ಇದರಿಂದ ಫಸಲಿನ ಅವಧಿ ಬಂದರೂ ಕೊಯ್ಲು ಸರಿಯಾದ ಸಮಯಕ್ಕೆ ಆಗದೆ ವಿಳಂಭವಾಗುತ್ತಿದೆ. ಸ್ಥಳೀಯ ಕಾರ್ಮಿಕರಿಗೆ ವೇತನ ಹೆಚ್ಚು ತಗಲುತ್ತಿದೆ. ಅಲ್ಲದೆ ಸ್ಥಳೀಯ ಕಾರ್ಮಿಕರ ಲಭ್ಯತೆ ಹೆಚ್ಚು ಇಲ್ಲ. ಇದರಿಂದ ವಲಸೆ ಕಾರ್ಮಿಕರನ್ನೇ ಬೆಳೆಗಾರರು ಅವಲಂಬಿಸಬೇಕಿದೆ. ಆದರೆ ಅವರ ಸಂಖ್ಯೆಯೂ ಈ ಬಾರಿ ಕಡಿಮೆಯಾಗಿದೆ ಎಂದು ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಹೇಳಿದರು. ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗಿದೆ. ಇದರಿಂದ ವಲಸೆ ಕಾರ್ಮಿಕರನ್ನು ಅವಲಂಭಿಸುವ ಪರಿಸ್ಥಿತಿ ಉಂಟಾಗಿದೆ. ವೇತನದಲ್ಲಿ ಗಂಭೀರ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಮಿಕರು ಕೂಲಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುವಂತಾಗಿದೆ. ಕಾಳು ಮೆಣಸು ಕೊಯ್ಲಿಗೆ ಈ ಬಾರಿ ತಮಿಳುನಾಡು ಹಾಗೂ ಕೇರಳ ಭಾಗದ ಕಾರ್ಮಿಕರ ಆಗಮನ ಕಡಿಮೆಯಿದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡ ಪಿ.ಆರ್. ಭರತ್ ತಿಳಿಸಿದರು.