ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಳ್ಳಂಕಿಯ ಅಂಬೇಡ್ಕರ್ ವಸತಿ ಶಾಲೆಯ ಸಹಯೋಗದಲ್ಲಿ ಶಾಲೆಗಳತ್ತ ಸಾಹಿತಿಗಳು ಎನ್ನುವ ವಿನೂತನ ಕಾರ್ಯಕ್ರಮ ಜರುಗಿತು.
ಶಾಲೆಗಳತ್ತ ಸಾಹಿತಿಗಳು ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಳ್ಳಂಕಿಯ ಅಂಬೇಡ್ಕರ್ ವಸತಿ ಶಾಲೆಯ ಸಹಯೋಗದಲ್ಲಿ ಶಾಲೆಗಳತ್ತ ಸಾಹಿತಿಗಳು ಎನ್ನುವ ವಿನೂತನ ಕಾರ್ಯಕ್ರಮ ಜರುಗಿತು. ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅವರ ಬದುಕು ಬರಹವನ್ನು ವಿದ್ಯಾರ್ಥಿಗಳೆದುರು ತೆರೆದಿಡಲಾಯಿತು.
ಹೆರಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚನ್ನಬಸಪ್ಪ ಮಹಾಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಾಷೆ ಬಿಟ್ಟರೆ ನಮಗೆ ಬದುಕಿಲ್ಲ. ಹಾಗೆಯೇ ಭಾಷೆ ಬೆಳೆಸುವ ಸಾಹಿತಿಗಳ ಕುರಿತು ಕೂಡ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ ಎಂದರು.ಎಸ್.ಡಿ.ಎಂ ಮಹಾವಿದ್ಯಾಲಯದ ಉಪನ್ಯಾಸಕ ವಿದ್ಯಾಧರ ಕಡತೋಕ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅವರ ಬದುಕು ಮತ್ತು ಬರಹಗಳ ಕುರಿತು ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಆಗಿ ಹೋದ ಕವಿಗಳ ಬಗ್ಗೆ ನಮಗೆಲ್ಲ ತಿಳಿದಿದೆ ನಮ್ಮ ನಡುವೆಯೇ ಇರುವ ಸಾಹಿತಿಗಳನ್ನು ನಾವು ಓದಿಕೊಳ್ಳುತ್ತಿಲ್ಲ, ಹೊಸ ತಲೆಮಾರಿಗೆ ಅವರ ಬರಹಗಳನ್ನು ದಾಟಿಸುವ ಕೆಲಸ ನಡೆಯುತ್ತಿಲ್ಲ. ಆದರೆ ಸಾಹಿತ್ಯ ಪರಿಷತ್ತು ಶಾಲೆಗಳತ್ತ ಸಾಹಿತಿಗಳು ಅನ್ನುವ ಕಾರ್ಯಕ್ರಮದ ಮೂಲಕ ಆ ಪ್ರಯತ್ನ ನಡೆಸುತ್ತಿದೆ. ಇದು ಶ್ಲಾಘನೀಯ ಕೆಲಸ ಎಂದರು.
ಡಾ. ಶ್ರೀಪಾದ ಶೆಟ್ಟಿ ವಿದ್ಯಾರ್ಥಿಗಳೊಟ್ಟಿಗೆ ಸಂವಾದ ನಡೆಸಿದರು.ಹೊನ್ನಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್. ಗೌಡ ಅಧ್ಯಕ್ಷತೆ ವಹಿಸಿದ್ದರು.
ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀನಿವಾಸ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಜಿಲ್ಲಾ ಗ್ರಂಥ ಪಾಲಕರ ಸಂಘದ ಅಧ್ಯಕ್ಷ ಜಿ.ಕೆ. ಗೌಡ, ಒಕ್ಕಲಿಗ ಯಕ್ಷಗಾನ ಬಳಗದ ಅಧ್ಯಕ್ಷ ಸುಬ್ರಮಣ್ಯ ಗೌಡ, ಕವಿ ಮಾಸ್ತಿ ಗೌಡ, ಮೀನಾ ಗೌಡ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕ ಶ್ರೀಧರ ಹೆಗಡೆ ಸ್ವರ ಸಂಯೋಜಿಸಿದ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ವಿನಾಯಕ ಎಸ್.ಎಂ. ಕವಿತೆ ವಾಚಿಸಿದರು. ಶಿಕ್ಷಕಿ ಪೃಥ್ವಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.