ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಹಲವು ಇಲಾಖೆಗಳಲ್ಲಿ ಅಧಿಕಾರಿಗಳಿಲ್ಲದೆ ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ವರ್ಗಾವಣೆಗೊಂಡು ಹಲವು ತಿಂಗಳು ಕಳೆದರೂ ಹೊಸದಾಗಿ ಅಧಿಕಾರಿಗಳನ್ನು ನೇಮಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳೇ ಶಾಸಕರಿಗೆ ಹೆದರಿ ಯಾರು ಕೂಡ ಇಲ್ಲಿಗೆ ಕೆಲಸಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ ಎಂದು ಟೀಕಿಸಿದರು.
ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಎಲ್ಲೆಲ್ಲೊಯೂ ಕಳ್ಳತನ, ಗಾಂಜಾ ಮಾರಾಟ, ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಶಿಶು ಮರಣ ಹೊಂದಿರುವುದು ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಹಿಂದಿನ ಅಧಿಕಾರದ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಏನೋ ನಡೆದಿದೆ ಎಂದು ಹಾಲಿ ಶಾಸಕ ನರೇಂದ್ರಸ್ವಾಮಿ ಅವರು ಆರೋಪಿಸುತ್ತಾರೆ. ಆಸ್ಪತ್ರೆಯಲ್ಲಿ ಈಗಿನ ಅವ್ಯವಸ್ಥೆ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅನ್ನದಾನಿ, ನನ್ನ ಅಧಿಕಾರದ ಅವಧಿಯಲ್ಲಿ ಆಸ್ಪತ್ರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗಿತ್ತು ಎಂದರು.
ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ನನ್ನ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪುತ್ಥಳಿಗೆ ಭದ್ರತೆ ಇಲ್ಲದೇ ಟ್ರ್ಯಾಕ್ಟರ್ ಹಾಗೂ ಜೆಸಿಬಿ ನಿಲ್ಲಿಸುವ ಸ್ಥಳವಾಗಿದೆ. ಭೀಕ್ಷೆ ಬೇಡಿಯಾದರೂ ಪುತ್ಥಳಿ ಸ್ಥಾಪಿಸುತ್ತೇವೆಂದು ಹೇಳುವ ದಲಿತ ಸಂಘಟನೆಗಳು ಕಾಂಪೌಂಡ್ ನಿರ್ಮಾಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದರು.ಶಾಸಕರ ಕೈಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೇ ಸಂಸದರ ನಿಧಿ ಹಾಗೂ ಎಂಎಲ್‌ಸಿ ನಿಧಿಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು ಎಂದರು.
ತಾಲೂಕಿನ ಹಲಗೂರು ಸಮೀಪದ ತೊರೆಕಾಡನಹಳ್ಳಿಯಿಂದ ಬೆಂಗಳೂರಿನ ಜನರಿಗೆ ಕಾವೇರಿ ನೀರನ್ನು ನೀಡಲಾಗುತ್ತಿದೆ. ಆದರೆ, ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಸಿಗುವ ಗ್ರಾಮಗಳಿಗೆ ನೀರು ಕೊಡಬೇಕೆಂದು ನನ್ನ ಅಧಿಕಾರದ ಅವಧಿಯಲ್ಲಿಯೇ ಸೂಚನೆ ನೀಡಲಾಗಿತ್ತು. ಆದರೂ ತಾಲೂಕಿನ ಹಲವು ಗ್ರಾಮಗಳಿಗೆ ನೀರು ಕೊಡುತ್ತಿಲ್ಲ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದು ಆಗ್ರಹಿಸಿದರು.ಬೆಂಗಳೂರು ಜಲ ಮಂಡಳಿಯಲ್ಲಿ ನೀಡುವ ಉದ್ಯೋಗವನ್ನು ಜೆಡಿಎಸ್ ಕಾರ್ಯಕರ್ತರಿಗೂ ನೀಡಬೇಕು. ನೀಡದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ನಂದಕುಮಾರ್, ಸಿದ್ದಚಾರಿ, ಸದಾನಂದ ಸೇರಿದಂತೆ ಮುಖಂಡರು ಇದ್ದರು.