ಅಧಿಕಾರವಿಲ್ಲದೇ ಬಿಜೆಪಿಗರಿಗೆ ಹತಾಶೆ: ಸಚಿವ ಮಂಕಾಳ ವೈದ್ಯ

| Published : Nov 20 2024, 12:31 AM IST

ಸಾರಾಂಶ

ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದು, ಸಿದ್ದರಾಮಯ್ಯನವರದ್ದು ಯಾವುದೇ ತಪ್ಪಿಲ್ಲ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಭಟ್ಕಳ: ಬಿಜೆಪಿಯವರು ಸುಳ್ಳು ಹೇಳಿಕೊಂಡೇ ರಾಜಕಾರಣ ಮಾಡುತ್ತಿದ್ದು, ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಮೇಲೆ ಯದ್ವಾತದ್ವಾ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಟೀಕಿಸಿದರು.

ಬೇಂಗ್ರೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದು, ಸಿದ್ದರಾಮಯ್ಯನವರದ್ದು ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯನವರಿಗೆ ಬಿಜೆಪಿಯವರಿಂದ ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಹಗರಣಗಳು ನಡೆದಿವೆ ಎಂದರು.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೋವಿಡ್ ಸಾಮಗ್ರಿಗಳನ್ನು ಚೀನಾದಿಂದ ತರಿಸಿದೆ. ನಮ್ಮ ದೇಶದಲ್ಲಿ ಈ ಸಾಮಗ್ರಿಗಳು ಕಡಿಮೆ ಬೆಲೆ ಸಿಕ್ಕರೂ ಚೀನಾದಿಂದ ಸಾಮಗ್ರಿ ತರಿಸಲು ಕಾರಣವೇನು ಎಂದು ಪ್ರಶ್ನಿಸಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ಮಾಡಿದ ಹಗರಣಕ್ಕೆ ಬಿಜೆಪಿಯವರು ಬೆಲೆ ತೆರಲೇಬೇಕು. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ಎಂದ ಅವರು, ಜಿಲ್ಲೆಯಲ್ಲಿ ವಕ್ಫ್ ಆಸ್ತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ತೊಂದರೆ ಆದರೆ 24 ಗಂಟೆಯಲ್ಲಿ ಸರಿಪಡಿಸುವ ಭರವಸೆ ನೀಡಿದ್ದೇನೆ. ಆದರೆ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಈ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ ಎಂದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಕ್ಫ್ ಆಸ್ತಿ ಯಾರಿಗೂ ಕೊಡಲು ಬಿಡುವುದಿಲ್ಲ ಎಂದು ಹೇಳಿದ್ದು, ಇದೀಗ ರಾಜಕೀಯಕ್ಕಾಗಿ ಉಲ್ಟಾ ಮಾತನಾಡುತ್ತಿದ್ದಾರೆ. ಬಿಜೆಪಿಯವರದ್ದು ಬರೀ ಸುಳ್ಳು ಹೇಳುವುದೇ ಆಗಿದೆ ಎಂದರು.

ಸರ್ಕಾರ ಅನರ್ಹರ ಬಿಪಿಎಲ್ ಕಾರ್ಡನ್ನು ರದ್ದುಪಡಿಸುತ್ತಿದೆ. ಆದರೆ ಅರ್ಹರ ಬಿಪಿಎಲ್ ಕಾರ್ಡಗೆ ಏನೂ ತೊಂದರೆ ಇಲ್ಲ ಎಂದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ. ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನ ಯಾವುದೇ ಶಾಸಕರೂ ಬಿಜೆಪಿ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದರು.

ನನ್ನ ಬಗ್ಗೆ ಯಾರು ಏನೇ ಬೇಕಾದರೂ ಟೀಕೆ ಮಾಡಲಿ. ಇದಕ್ಕೆಲ್ಲ ನಾನು ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ. ಜಿಲ್ಲೆಯ ಅಭಿವೃದ್ಧಿಯೇ ನನಗೆ ಮುಖ್ಯವಾಗಿದೆ. ನಾನು ಸಾಮಾನ್ಯ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಜನರ ಕಷ್ಟ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಟೀಕೆ, ಟಿಪ್ಪಣಿಗಳಿಂದ ನನ್ನನ್ನು ಯಾರಿಂದಲೂ ಕುಗ್ಗಿಸಲು ಸಾಧ್ಯವಿಲ್ಲ ಎಂದರು.ಮುಸ್ಕಾನಾಗೆ ಬಂಗಾರದ ಪದಕ

ಕಾರವಾರ: ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿಇ ಬಯೋಟೆಕ್‌ನಲ್ಲಿ ಕಾರವಾರ ಮೂಲದ ಮುಸ್ಕಾನ ಮಧುಕೇಶ್ವರ ನಾಯ್ಕ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮುಸ್ಕಾನ ಮಧುಕೇಶ್ವರ ನಾಯ್ಕ ಬಿಇ ಬಯೋಟೆಕ್‌ನಲ್ಲಿ ಟಾಪರ್ ಆಗಿದ್ದರು. ಹುಬ್ಬಳ್ಳಿಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 6ನೇ ಘಟಿಕೋತ್ಸವದಲ್ಲಿ ಬಿಇ ಬಯೋಟೆಕ್ ಆದವರಿಗೆ ನೀಡುವ ಡಾ. ಎಸ್.ಎಸ್., ಭಾವಿಕಟ್ಟಿ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು. ಇದೇ ವೇಳೆ ಪದವಿಯ 12 ಹಾಗೂ ಸ್ನಾತಕೋತ್ತರ ಪದವಿಯ 6 ವಿದ್ಯಾರ್ಥಿಗಳು ಸೇರಿ 18 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು. ಕಾರವಾರ ಮೂಲದ ಮಧುಕೇಶ್ವರ ನಾಯ್ಕ ಹಾಗೂ ಮಹಾನಂದ ನಾಯ್ಕ ದಂಪತಿಯ ಎರಡನೇ ಪುತ್ರಿಯಾಗಿದ್ದಾಳೆ.