ಸಾರಾಂಶ
ಯಲಬುರ್ಗಾ: ವಾಲ್ಮೀಕಿ ರಚಿತ ರಾಮಾಯಣ ಓದದೇ ಅದು ಹೇಗೆ ಮಹರ್ಷಿಯ ವಿಚಾರಗಳು ಅರ್ಥವಾಗುತ್ತದೆ ಎಂದು ಮಾಜಿ ಸಚಿವ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.
ಸಾಲಭಾವಿಯಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ನಾಯಕ ಸಮಾಜದ ಜನ ಜಾಗೃತಿ ಸಮಾವೇಶದಲ್ಲಿ ಪರಿಶಿಷ್ಟ ಪಂಗಡದ ತಲ್ಲಣಗಳ ಕುರಿತು ಅವರು ಉಪನ್ಯಾಸ ನೀಡಿದರು. ವಾಲ್ಮೀಕಿಯ ಆದರ್ಶ ತಿಳಿಯಬೇಕಾದರೆ ರಾಮಾಯಣ ಗ್ರಂಥ ಪ್ರತಿಯೊಬ್ಬರ ಮನೆಯಲ್ಲಿಟ್ಟುಕೊಳ್ಳಬೇಕು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ರಾಮಾಯಣ ಲಭ್ಯವಾಗುವಂತೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ. ವಾಲ್ಮೀಕಿ ದರೋಡೆಕೋರ, ಕೊಲೆ ಮಾಡಿದ ಎಂದು ಕೆಲವರು ಸೃಷ್ಟಿ ಮಾಡುತ್ತಾರೆ. ವಾಲ್ಮೀಕಿ ತನ್ನ ಪೂರ್ವಾಶ್ರಮದಲ್ಲಿ ಕೆಟ್ಟವನಾಗಿದ್ದನು ಎಂದು ಸಾಬೀತುಪಡಿಸಿದರೆ ನನ್ನ ಉಳಿದ ಆಯುಷ್ಯದಲ್ಲಿ ಅವರ ಮನೆಯ ಆಳಾಗಿ ದುಡಿಯುತ್ತೇನೆ ಎಂದು ಸವಾಲು ಹಾಕಿದರು.ಸಮಾಜವಾದ, ಮಾನವತಾವಾದದ ಬಗ್ಗೆ ಮಾತಾಡುತ್ತೇವೆ. ಗಾಂಧೀಜಿ ಬಯಸಿದ್ದು ರಾಮಾಯಣದ ರಾಮರಾಜ್ಯ. ಜಾತಿ, ವರ್ಗ ಸಮಪಾಲು, ಸಮಬಾಳು ಬಯಸಿದವರು ಮಹರ್ಷಿ ವಾಲ್ಮೀಕಿ ಎಂದರು.
ನನ್ನ ಗೆಳೆಯ ರಾಯರಡ್ಡಿ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆತ ಮಂತ್ರಿಯಾಗೋಕೆ ದೆಹಲಿಗೆ ಹೋಗಿದ್ದಾನೆ. ಮಂತ್ರಿಯಾಗಲಿ ತಪ್ಪೇನಿಲ್ಲ. ಯಾವ ರಾಜ್ಯದಲ್ಲಿ ವಿಚಾರವಂತರು, ವಿಚಕ್ಷಣವುಳ್ಳವರು, ದೇಶಭಕ್ತರಿದ್ದರೆ ಆ ರಾಜ್ಯ ಉದ್ಧಾರವಾಗುತ್ತದೆ. ಜನರು ಪ್ರಾಮಾಣಿಕ ವಿಚಾರವಂತರಾಗಬೇಕು ಎಂದರು.೧೮ ಶಾಸಕರು, ೩ ಜನ ಎಎಲ್‌ಸಿ, ೩ ಎಂಪಿಗಳಿದ್ದಾರೆ. ಅಧಿಕಾರ ಮಜಾ ಮಾಡೋಕಲ್ಲ. ಅನ್ಯಾಯದ ವಿರುದ್ಧ ಬಾಯಿಬಿಡಬೇಕು. ಸ್ವಾಮೀಜಿಗಳು ಬಾಯಿಬಿಡಬೇಕು. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ₹೧೮೦ ಕೋಟಿ ಲೂಟಿ ಹೊಡಿತಾರೆ. ಅಧಿಕಾರ ಅನುಭವಿಸುವ ಮಹಾನುಭಾವ ಧ್ವನಿ ಎತ್ತದಿದ್ದರೆ ಜನ ಚಾಟಿ ಬೀಸುವ ಕಾಲ ದೂರವಿಲ್ಲ. ರಿಸರ್ವೇಶನ್ ಯಾರಪ್ಪನ ಸ್ವತ್ತಲ್ಲ. ಹಡಪದ, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿಸಲು ಒತ್ತಾಯ ಮಾಡಿದ್ದೇನೆ. ಎಸ್ಟಿ ಮತ್ತು ಕುರುಬ ಸಮಾಜದ ಪರ್ಯಾಯ ಪದ ರೂಪಿಸಲಾಗಿತ್ತು. ಯಾವುದೇ ಸಮಾಜ ಎಸ್ಸಿ, ಎಸ್ಟಿಗೆ ಸೇರಿಸಬೇಕಾದರೆ ಕುಲಶಾಸ್ತ್ರ ಅಧ್ಯಯನ ಆಗಬೇಕು ಎಂದರು.
ವಾಲ್ಮೀಕಿ ವಂಶಸ್ಥರು ದರೋಡೆಕೋರರಲ್ಲ: ಸಮಾಜದವರು ಮದ್ಯ, ಜೂಜು, ದರೋಡೆ ಬಿಡಬೇಕು. ವಿದ್ಯೆ, ಸ್ವಾಭಿಮಾನ, ಸ್ವಯಂ ಉದ್ಯೋಗ ಮೈಗೂಡಿಸಿಕೊಳ್ಳಬೇಕು. ಇದರಿಂದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಕಂಪ್ಲಿ ಭಾಗದ ಆಸುಪಾಸಿನಲ್ಲಿ ಕುಮಾರರಾಮನ ಪುತ್ಥಳಿ ಸ್ಥಾಪನೆಯಾಗಬೇಕು. ಅಂಜನಾದ್ರಿಯಲ್ಲಿ ವಾಲ್ಮೀಕಿ ಪುತ್ಥಳಿ ಮತ್ತು ತಪೋವನ ನಿರ್ಮಾಣಕ್ಕೆ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಬೇಕು ಎಂದು ಉಗ್ರಪ್ಪ ಹೇಳಿದರು.ಮಾಜಿ ಸಚಿವ ಕೆ. ಶಿವನಗೌಡ ನಾಯಕ ಮಾತನಾಡಿ, ವಿ.ಎಸ್. ಉಗ್ರಪ್ಪ ಅವರು ೫೦ ವರ್ಷಗಳ ಕಾಲ ಜನಸೇವೆ ಮಾಡಿದ್ದಾರೆ. ಈಗ ಅವರನ್ನು ಸರ್ಕಾರ ಕಡೆಗಣಿಸಿದೆ. ಶೋಷಿತ ವರ್ಗದವರು ಇದುವರೆಗೂ ಮುಖ್ಯಮಂತ್ರಿ ಆಗಿಲ್ಲ. ಆ ಸ್ಥಾನವನ್ನು ಸತೀಶ ಜಾರಕಿಹೊಳಿ ತುಂಬುತ್ತಾರೆ ಎನ್ನುವ ಆಶಾಭಾವನೆ ಇದೆ. ಶ್ರೀರಾಮುಲ ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಿದರು ಎಂದರು.
ಎಂಎಲ್‌ಸಿ ಹೇಮಲತಾ ನಾಯಕ, ಹೋರಾಟಗಾರ್ತಿ ದೇವದುರ್ಗದ ರೂಪಾ ಶ್ರೀನಿವಾಸ ನಾಯಕ, ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಟಿ. ರತ್ನಾಕರ ಮಾತನಾಡಿದರು.ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳಿಗೆ ತುಲಾಭಾರ ಸೇವೆ ನಡೆಯಿತು.
ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ರಾಜಬೀದಿಯಲ್ಲಿ ಮಹಿಳೆಯರಿಂದ ಕುಂಭ ಕಳಸ, ಸಕಲ ವಾದ್ಯ ಮೇಳದೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಹುಲಿಹೈದರ ವಾಲ್ಮೀಕಿ ಗುರುಗಳಾದ ಶ್ರೀರಾಜಾ ನವೀನಚಂದ್ರ ನಾಯಕ ಸಾನ್ನಿಧ್ಯ ವಹಿಸಿದ್ದರು.ಮಾಜಿ ಸಚಿವ ಕೆ. ಶಿವನಗೌಡ ನಾಯಕ, ಎಂಎಲ್‌ಸಿ ಹೇಮಲತಾ ನಾಯಕ, ರೂಪಾ ಶ್ರೀನಿವಾಸ ನಾಯಕ, ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್, ರಾಜು ನಾಯಕ, ಮಾನಪ್ಪ ಪೂಜಾರ, ಟಿ. ರತ್ನಾಕರ, ಮಾಲತಿ ನಾಯಕ, ರಾಮಣ್ಣ ಕಲ್ಲಣ್ಣವರ, ವೀರನಗೌಡ ಬಳೂಟಗಿ, ಶಿವಣ್ಣ ರಾಯರಡ್ಡಿ, ಹನುಮೇಶ ನಾಯಕ, ಫಕೀರಪ್ಪ ತಳವಾರ್, ಶಂಕ್ರಗೌಡ ಸಾಲಭಾವಿ, ರಾಮಣ್ಣ ಸಾಲಭಾವಿ, ಕೆರಿಬಸಪ್ಪ ನಿಡಗುಂದಿ, ಬಾಲದಂಡಪ್ಪ ತಳವಾರ್, ಹಂಚ್ಯಾಳಪ್ಪ ತಳವಾರ್, ಜ್ಯೋತಿ ಗೊಂಡಬಾಳ, ಶರಣಪ್ಪ ಹೊಸ್ಕೇರಿ, ವಿಜಯ ತಾಳಕೇರಿ, ಗುಂಡನಗೌಡ ಮಾಲಿಪಾಟೀಲ್, ಶಶಿಧರ ಗಡಾದ, ಭೀಮಣ್ಣ ಹವಳಿ, ಶ್ರೀಕಾಂತಗೌಡ ಮಾಲಿಪಾಟೀಲ್, ಕಳಕಪ್ಪ ತಳವಾರ್ ಸೇರಿದಂತೆ ಮತ್ತಿತರರು ಇದ್ದರು.
;Resize=(128,128))
;Resize=(128,128))