ಸಾರಾಂಶ
ಇಂದು ನಮ್ಮ ಬೆನ್ನ ಹಿಂದೆ ಗುರುವಿಲ್ಲ. ಬದುಕಿಗೊಂದು ಗುರಿಯಿಲ್ಲ. ಗುರು ಮತ್ತು ಗುರಿಯಿಲ್ಲದ ಜೀವನದ ಕಾರಣದಿಂದ ನಮ್ಮ ಯುವಶಕ್ತಿ ಅಪವ್ಯಯಗೊಳ್ಳುತ್ತಿದೆ. ಮಕ್ಕಳ ಮನಸ್ಸಿಗೆ ಧಾರ್ಮಿಕತೆ,ಸಂಸ್ಕಾರ ಬಿತ್ತುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಕೆ.ಆರ್ .ಪೇಟೆ
ಗುರುವಿನ ಮಹತ್ವ ಅರಿಯದೆ ಇರುವುದರಿಂದ ಇಂದಿನ ಸಮಾಜ ಅಶಾಂತಿಯ ಬದುಕಿನ ಕಡೆ ಸಾಗುತ್ತಿದೆ ಎಂದು ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯ ರಂಭಾಪುರಿ ಶಾಖಾ ಪುರವರ್ಗ ಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಬಿಕ್ಕಸಂದ್ರ ಗ್ರಾಮದಲ್ಲಿ ಲೋಕ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಭದ್ರಕಾಳಿ, ನಂದಿಶ್ವರ, ಶ್ರೀ ಚೌಡೇಶ್ವರಿ ಅಮ್ಮನವರ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಾಲಯದ ಶಿಖರ ಕಳಸಾರೋಹಣ, ಕುಂಭಾಭಿಷೇಕ, ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಗುರು ಮಾರ್ಗದರ್ಶಕ. ಗುರುವಿನ ಅನುಗ್ರಹವಿಲ್ಲದೆ ನಾವು ದೈವ ಮಾರ್ಗವನ್ನು ಕಾಣಲಾಗುವುದಿಲ್ಲ. ಗುರುವಿನ ಮಹತ್ವವನ್ನು ಅರಿಯದೆ ನಾವು ಸಾಗುತ್ತಿದ್ದೇವೆ. ಈ ಹಿಂದೆ ನಮ್ಮ ಬೆನ್ನ ಹಿಂದೆ ಗುರುವಿದ್ದ. ನಮ್ಮ ಮುಂದೆ ಬದುಕಿನ ಗುರಿಯಿತ್ತು. ಇದರಿಂದ ನಮ್ಮ ಹಿರಿಯರು ವೀರರಂತೆ ಮುನ್ನುಗ್ಗುತ್ತಿದ್ದರು ಎಂದರು.ಇಂದು ನಮ್ಮ ಬೆನ್ನ ಹಿಂದೆ ಗುರುವಿಲ್ಲ. ಬದುಕಿಗೊಂದು ಗುರಿಯಿಲ್ಲ. ಗುರು ಮತ್ತು ಗುರಿಯಿಲ್ಲದ ಜೀವನದ ಕಾರಣದಿಂದ ನಮ್ಮ ಯುವಶಕ್ತಿ ಅಪವ್ಯಯಗೊಳ್ಳುತ್ತಿದೆ. ಮಕ್ಕಳ ಮನಸ್ಸಿಗೆ ಧಾರ್ಮಿಕತೆ,ಸಂಸ್ಕಾರ ಬಿತ್ತುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಧರ್ಮ ಮಾರ್ಗದಲ್ಲಿ ಮಾತ್ರ ಬದುಕಿನ ನೆಮ್ಮದಿಯಿದೆ. ಚಿಕ್ಕ ವಯಸ್ಸಿನಿಂದ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಸಂಸ್ಕಾರವಿಲ್ಲದ ಜೀವಿಗೆ ಮೋಕ್ಷವಿಲ್ಲ. ಮಕ್ಕಳು ತಂದೆ, ತಾಯಿಯನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ನೊಂದವರು ಹಾಗೂ ಬಡಜನರಿಗೆ ನೆರವಾಗಬೇಕು ಎಂದರು.ತೆಂಡೆಕೆರೆ ಶ್ರೀ ಬಾಳೆ ಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ. ದೇವರು, ಧರ್ಮ ಹಾಗೂ ನಮ್ಮ ಸಂಸ್ಕೃತಿ ಪರಂಪರೆ ಮರೆಯುತ್ತಿರುವ ಯುವಜನರನ್ನು ಸರಿ ದಾರಿಗೆ ಕರೆ ತರುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ, ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡ ಬಿ.ನಂಜಪ್ಪ, ಜಿಪಂ ಮಾಜಿ ಸದಸ್ಯ ಅಘಲಯ ಮಂಜುನಾಥ್, ತಾಪಂ ಮಾಜಿ ಸದಸ್ಯ ಬಿ.ಆರ್.ದಿನೇಶ್, ರಂಗನಾಥಪುರ ಕ್ರಾಸ್ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಮಾಜಿ ಅಧ್ಯಕ್ಷ ಎನ್.ಡಿ.ಮೊಗಣ್ಣಗೌಡ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ದೇವಾಲಯ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಪುಟ್ಟರಾಮೇಗೌಡ ಭಾಗವಹಿಸಿದ್ದರು.