ಸಾರಾಂಶ
ಶಿರೂರಿನಲ್ಲಿ ಶಾಲಾ ರಜತ ಮಹೋತ್ಸವ, ಗುರುವಂದನೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕುಕನೂರು
ಶಾಲೆಯಿಂದ ಅಕ್ಷರ ದೀಪ ಹೃದಯದಲ್ಲಿ ಸದಾ ಪ್ರಜ್ವಲಿಸುತ್ತದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಶಿರೂರು ಗ್ರಾಮದಲ್ಲಿ ಶನಿವಾರ ಜರುಗಿದ ಶ್ರೀ ಬಸಮ್ಮ ಎಸ್ ಪೋ.ಪಾಟೀಲ್ ಸರ್ಕಾರಿ ಪ್ರೌಢ ಶಾಲೆಯ ರಜತ ಮಹೋತ್ಸವ, ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಮಾನ್ಯವಾಗಿ ಜನರು ತಮ್ಮ ಹುಟ್ಟುಹಬ್ಬವನ್ನು ಕೆಕ್ ತಂದು, ದೀಪ ಊದಿ, ಆರಿಸಿ ಆಚರಣೆ ಮಾಡಿಕೊಂಡರೆ, ದೀಪವಿಲ್ಲದ ಗುಡಿಸಿಲಿನಿಂದ ಬಂದು, ಅಕ್ಷರ ದೀಪವನ್ನು ತನ್ನ ಎದೆಯಲ್ಲಿ ಬಿತ್ತುವ ಶಾಲೆಯ ಹುಟ್ಟಹಬ್ಬ ಆಚರಣೆ ಮಾಡುತ್ತಿರುವ ಶಾಲಾ ಹಳೆ ವಿದ್ಯಾರ್ಥಿಗಳ ಕಾರ್ಯ ಅಗಾಧ. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ ಎಂದರು.ಶಿರೂರು ಗ್ರಾಮವನ್ನು ನೋಡಿದರೆ ಚಂಡಿಗಡ್ ನೋಡಿದಂತಾಗುತ್ತದೆ. ಇಲ್ಲಿನ ಸ್ವಚ್ಛತೆ, ಪರಿಸರ, ಅಭಿವೃದ್ಧಿಯನ್ನು ಎಲ್ಲರೂ ಸೇರಿ ಮಾಡಬೇಕು. ವರ್ಷಕ್ಕೊಮ್ಮೆ ಗ್ರಾಮಸ್ಥರು ಸೇರಿ ಊರು ಅಭಿವೃದ್ಧಿಗಾಗಿ ಒಂದು ಸಂಕಲ್ಪ ದಿನವನ್ನಾಗಿ ಮಾಡಬೇಕು. ಒಂದು ಊರು ಕಟ್ಟಲು ಎಲ್ಲರಿಗೂ ದೊಡ್ಡ ಮನಸ್ಸು ಬರಬೇಕು. ಮಕ್ಕಳು ಜಗವ ಬೆಳಗುವ ದೀಪ ಇದ್ದಂತೆ. ಶಾಲೆ ದೀಪ ಬೆಳಗುವ ಪಣತಿ ಇದ್ದಂತೆ. ಮಕ್ಕಳ ಹೃದಯದಲ್ಲಿ ಶಾಲೆ ಎಂಬ ಪಣತಿ ಬೆಳಕು ಎಂಬ ಶಿಕ್ಷಣ, ಅರಿವು, ಸಂಸ್ಕೃತಿಯನ್ನು ಸದಾ ಪ್ರಜ್ವಲಿಸುವಂತೆ ಮಾಡುತ್ತದೆ ಎಂದರು.
ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಊರಲ್ಲಿ ಪ್ರೌಢಶಾಲೆ ಆರಂಭವಾಗಿ ೨೫ ವರ್ಷ ಕಳೇದಿದೆ. ಶಾಲೆಯಲ್ಲಿ ಅಭ್ಯಾಸ ಮಾಡಿದಂತಹ ಎಲ್ಲಾ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಬಾಲ್ಯದ ಹಳೆಯ ನೆನೆಪುಗಳನ್ನು ಹಂಚಿಕೊಳ್ಳಬೇಕು. ನಮ್ಮ ಬದುಕು ನಮ್ಮ ಒಬ್ಬರಿಗೆ ಸೀಮಿತವಾಗದೆ ಇತರೆ ಬಡವರಿಗೆ ನೆರವಾಗಬೇಕು. ಊರಿನಲ್ಲಿರುವ ಬಡ ಮಕ್ಕಳ ಶಿಕ್ಷಣಕ್ಕಾಗಿ ಹಳೆ ವಿದ್ಯಾರ್ಥಿಗಳು ಸಹಾಯ ಮಾಡಬೇಕೆಂದರು.ತೆರೆದ ವಾಹನದಲ್ಲಿ ಹಳೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ಸಕಲವಾದ್ಯಗಳೊಂದಿಗೆ ಮೆರವಣಿಗೆ ಮಾಡಿದರು. ₹೬ ಲಕ್ಷ ಸಂಗ್ರಹ:
ಹಳೆಯ ವಿದ್ಯಾರ್ಥಿ ಪ್ರಕಾಶ ಮಾದಿನೂರು ಮಾತನಾಡಿ, ೨೫ ವರ್ಷ ಅಭ್ಯಾಸ ಮಾಡಿದಂತಹ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ ಎಲ್ಲರಿಂದ ಕಾರ್ಯಕ್ರಮಕ್ಕೆ ದೇಣಿಗೆ ಸಂಗ್ರಹಿಸಲಾಗಿದೆ. ₹ ೬ ಲಕ್ಷ ಸಂಗ್ರಹವಾಗಿದೆ. ಈ ಶಾಲೆಗೆ ಒಂದು ಉತ್ತಮ ಸಭಾಂಗಣ ನಿರ್ಮಾಣ ಮಾಡಿಕೊಡುತ್ತೇವೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುತ್ತೇವೆ ಎಂದರು.ಅನ್ನದಾನೇಶ್ವರಮಠದ ಶ್ರೀಮಹಾದೇವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಚ್.ಎಸ್. ಶಿವರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ್, ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತರಾದ ಅಬ್ದುಲ್ ಖಾದರ ನಡಕಟ್ಟಿನ್, ಶಿರೂರು ಶಾಲೆಯ ಭೂದಾನಿಗಳಾದ ಶಂಕರಗೌಡ ಪೋ.ಪಾಟೀಲ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಚೌದ್ರಿ, ಉಪನ್ಯಾಸಕರಾಗಿ ಜಾಕೀರ ಹುಸೇನ, ಬಿಂಧುಮಾದವ, ಪ್ರಾಚಾರ್ಯ ಈಶಪ್ಪ ಮಳಗಿ, ಸಿಆರ್‌ಪಿ ಪೀರಸಾಬ ದಫೇದಾರ, ಅಶೋಕ ಮಾದಿನೂರು, ಶರಣಪ್ಪ ಹಂಡಿ, ಲಕ್ಷ್ಮಣ ಹಿರೇಮನಿ, ಹನಮಂತಪ್ಪ ಬಿನ್ನಾಳ, ಬಸವರಾಜ ಅಂಗಡಿ, ಬಾಳಪ್ಪ ಕಲ್ಮನಿ, ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಗ್ರಾಮಸ್ಥರು, ವಿದ್ಯಾರ್ಥಿಗಳ ಪಾಲಕರು ಶಿಕ್ಷಕರು ಸೇರಿದಂತೆ ಅನೇಕರು ಇದ್ದರು.