ಬೂದನೂರು ಗ್ರಾಮದಲ್ಲಿ ಡೆಂಘೀಯಿಂದ ಮಹಿಳೆ ಆಸ್ಪತ್ರೆಗೆ ದಾಖಲು

| Published : Jul 31 2025, 12:45 AM IST

ಸಾರಾಂಶ

ಕಳೆದ ಹಲವು ದಿನಗಳಿಂದ ನಿಯಮಿತವಾಗಿ ಗ್ರಾಮದ ಸ್ವಚ್ಛತೆ ಮಾಡದೇ ರೋಗಗಳಿಗೆ ಗ್ರಾಪಂಯೇ ಆಹ್ವಾನ ನೀಡುತ್ತಿದೆ. ಗ್ರಾಪಂ ವ್ಯಾಪ್ತಿಯ ಖಾಲಿ ನಿವೇಶನ, ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿದ್ದು, ಇತ್ತೀಚಿಗೆ ಬಿದ್ದ ಮಳೆಯಿಂದ ಡೆಂಘೀ ಉಲ್ಬಣಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿ ತಾಲೂಕಿನ ಬೂದನೂರು ಗ್ರಾಮ ಪಂಚಾಯ್ತಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು‌‌.

ಗ್ರಾಮದ 3ನೇ ವಾರ್ಡ್‌ನ ಮಹಿಳೆಗೆ ಡೆಂಘೀ ಸೋಂಕು ತಗುಲಿ ಸ್ಯಾಂಜೋ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದಕ್ಕೆ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವುದೇ ಕಾರಣ ಎಂದು ದೂರಿದರು.

ಕಳೆದ ಹಲವು ದಿನಗಳಿಂದ ನಿಯಮಿತವಾಗಿ ಗ್ರಾಮದ ಸ್ವಚ್ಛತೆ ಮಾಡದೇ ರೋಗಗಳಿಗೆ ಗ್ರಾಪಂಯೇ ಆಹ್ವಾನ ನೀಡುತ್ತಿದೆ. ಗ್ರಾಪಂ ವ್ಯಾಪ್ತಿಯ ಖಾಲಿ ನಿವೇಶನ, ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿದ್ದು, ಇತ್ತೀಚಿಗೆ ಬಿದ್ದ ಮಳೆಯಿಂದ ಡೆಂಘೀ ಉಲ್ಬಣಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡೆಂಘೀ ಕಾಣಿಸಿಕೊಂಡಿರುವ ಗ್ರಾಮದ ಮಹಿಳೆ ಮನೆ ಸಮೀಪದಲ್ಲೇ ಸಾವಿರಾರು ಮಕ್ಕಳು ಓದುವ ಶ್ರೀವೆಂಕಟೇಶ್ವರ ವಿದ್ಯಾ ನಿಕೇತನ ಶಾಲೆ ಇದ್ದು, ಮಕ್ಕಳಿಗೆ ರೋಗ ಹರಡುವ ಭೀತಿ ಎದುರಾಗಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಪ್ರಕಾಶ್, ಸಿದ್ದರಾಜು, ಚಂದ್ರಶೇಖರ್, ಗ್ರಾಪಂ ಮಾಜಿ ಸದಸ್ಯರಾದ ಕುಳ್ಳ, ಸತೀಶ್, ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಸವಿತಾ, ನಾಗರತ್ನ, ವಿಜಯ, ಶಿವರಾಜು, ಕಾರ್ತಿಕ್ ಹಲವರು ಇದ್ದರು.

ಸಿಎಂ ಪುತ್ರ ಡಾ.ಯತೀಂದ್ರ ರಾಜ್ಯದ ಜನತೆ ಕ್ಷಮೆಯಾಚಿಸಲಿ: ವೆಂಕಟಗಿರಿಯಯ್ಯ

ಮಂಡ್ಯ:

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡಿ ಹೇಳಿಕೆ ನೀಡಿರುವ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ವಡಿ ಅವರಿಗೆ ಸಿದ್ದರಾಮಯ್ಯರನ್ನು ಹೋಲಿಕೆ ಮಾಡಿರುವುದು ಸಮಾಜದ್ರೋಹ ಕೃತ್ಯ. ಡಿ.ದೇವರಾಜ ಅರಸು ಅವರಿಗೂ ಸಿದ್ದರಾಮಯ್ಯರನ್ನು ಹೋಲಿಕೆ ಮಾಡಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ. ಪರಿಶಿಷ್ಟ ಸಮುದಾಯಕ್ಕೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಇತರೆ ಯೋಜನಗೆಳಿಗೆ ಬಳಸಿ ಅನ್ಯಾಯವೆಸಗಲಾಗುತ್ತಿದೆ ಎಂದು ಆರೋಪಿಸಿದರು.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ದುರ್ಬಳಕೆಯಾಗುತ್ತಿದ್ದರೂ ಪ.ಜಾತಿ, ವರ್ಗದ ಸಚಿವರು ತುಟಿ ಬಿಚ್ಚುತ್ತಿಲ್ಲ. ಯಾವುದೇ ಅನುದಾನ ವರ್ಗಾವಣೆಯಾಗಿಲ್ಲ ಎನ್ನುವ ಸಚಿವ ಪ್ರಿಯಾಂಕ ಖರ್ಗೆ ಅವರು ತಮ್ಮ ಸರ್ಕಾರದಲ್ಲಿ ಈ ಬಗ್ಗೆ ಶ್ವೇತ ಪತ್ರ ಹೊರಡಿಸಲು ಒತ್ತಾಯ ಮಾಡಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಜಿಧ್ಯಕ್ಷ ಆನಂದ್, ಮಹಿಳಾ ಜಿಧ್ಯಕ್ಷ ಸುಶ್ಮಿತ ಇತರರು ಇದ್ದರು.