ಕನ್ನಡಪ್ರಭ ವಾರ್ತೆ ಬೆಳಗಾವಿ
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಪ್ರಭಾವಿ ವ್ಯಕ್ತಿಗಳ ವಿರುದ್ಧ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಸಂಚು ರೂಪಿಸುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಅಲ್ಲದೇ, ಆಕೆಯ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ರೇಷ್ಮಾ ಶಂಕರ ಮುತಗಾರ ಎಂಬ ಮಹಿಳೆ ಎಂಟು ತಿಂಗಳ ಹಿಂದೆ ಮದುವೆಯಾಗಿ ಮೋಸ ಮಾಡಿ ಓಡಿ ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು. ತುಮಕೂರಿನ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಲ್ಯಾಣ ಎಂಬಾತ ಮ್ಯಾಟ್ರಿಮೋನಿಯ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಎರಡು ಬೇರೆ ಬೇರೆ ವಾಟ್ಸಪ್ ಸಂಖ್ಯೆಗಳ ಮೂಲಕ ಕರೆ ಹಾಗೂ ಸಂದೇಶ ಕಳುಹಿಸಿ, ನಾನು ಒಂದು ಲಕ್ಷ ರುಪಾಯಿ ಕೊಟ್ಟಿದ್ದೇನೆ, ಯಾಕೆ ಕೆಲಸ ಮಾಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದರು ಎಂದರು.ನಂತರ ಮಹಿಳೆಯನ್ನು ಕರೆಸಿ ವಿಚಾರಿಸಿದಾಗ, ನನ್ನ ಮೊಬೈಲ್‌ನ ವಿದೇಶಿ ಪರಿಶೀಲನಾ ವರದಿ ತರಿಸಿ. ಈ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ. ಇದೇ ರೀತಿಯ ಪ್ರಕರಣಗಳನ್ನು ನಗರ ಠಾಣೆಗಳಲ್ಲೂ ಮಾಡಿದ್ದಾಳೆ ಎಂದು ಸಂಬಂಧಪಟ್ಟ ವ್ಯಕ್ತಿ ಮಾಹಿತಿ ನೀಡಿದ್ದಾನೆ. ಈ ಹಿನ್ನೆಲೆ ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಹಲವು ಪ್ರಕರಣಗಳಲ್ಲಿ ಇದೇ ಮಾದರಿಯ ಆರೋಪ ಮಾಡಿರುವುದು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.
2012ರಲ್ಲಿ ಕುಡಚಿ ಪೊಲೀಸ್ ಠಾಣೆಯಲ್ಲಿ ಪಕ್ಕದ ಮನೆಯ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಳು. 2022ರಲ್ಲಿ ಘಟಪ್ರಭಾದಲ್ಲಿ ನಾಗರಾಜ ಎಂಬ ಪೊಲೀಸ್ ಪೇದೆಯ ವಿರುದ್ಧ ಗಂಡ ಬಿಟ್ಟು ಹೋಗಿದ್ದಾನೆ ಎಂದು ಆರೋಪ ಮಾಡಿದ್ದಳು. 2023ರಲ್ಲಿ ಗಜೇಂದ್ರಗಡದಲ್ಲಿ ಆಕಾಶ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದಳು. ಇತ್ತೀಚೆಗೆ 2025ರಲ್ಲಿ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುರೇಶ್ ಎಂಬಾತ ಮೋಸ ಮಾಡಿದ್ದಾನೆ ಎಂದು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಲ್ಲದೆ, ಅಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ ಎಂದು ಮಾಹಿತಿ ನೀಡಿದರು.ಈಕೆ ಒಬ್ಬಳೇ ಈ ರೀತಿಯ ಕೃತ್ಯ ನಡೆಸುತ್ತಿಲ್ಲ. ಆಕೆಯ ಹಿಂದೆ ಇನ್ನೂ ಕೆಲವರು ಇರುವ ಶಂಕೆ ಇದೆ. ಸಹಾಯ ಮಾಡಿದವರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.