ಸಾರಾಂಶ
- ಮಹಿಳೆ ಮೇಲೆ 20 ಜನ ಅಮಾನುಷ ಹಲ್ಲೆ ಮಾಡ್ತಾರೆಂದ್ರೆ ಏನರ್ಥ?: ಸದಸ್ಯೆ ಡಾ.ಅರ್ಚನಾ ಮಜುಂದಾರ್ ಕಿಡಿ
- ನಮ್ಮ ದೇಶದಲ್ಲಿ ಮಹಿಳೆಗೆ ಗೌರವ ಸ್ಥಾನವಿದ್ದು, ಹೆಣ್ಣಿನ ಮೇಲಿನ ದೌರ್ಜನ್ಯ ಸಹಿಸೊಲ್ಲ: ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆಮುಸ್ಲಿಂ ಮಹಿಳೆಯೊಬ್ಬಳ ಮೇಲೆ ತಾಲಿಬಾನ್ ಮಾದರಿಯಲ್ಲಿ ಅಮಾನುಷವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮಕ್ಕೆ ಸೋಮವಾರ ದೆಹಲಿಯಿಂದ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಭೇಟಿ ನೀಡಿ, ಪರಿಶೀಲಿಸಿದರು.
ಚನ್ನಗಿರಿ ತಾಲೂಕಿನ ತಾವರಕೆರೆಯಲ್ಲಿ ಏ.9ರಂದು ಮಹಿಳೆಯೊಬ್ಬರ ವಿರುದ್ಧ ಮಸೀದಿಯಲ್ಲಿ ದೂರು ದಾಖಲಾಗಿದ್ದು, ಮಸೀದಿಯಿಂದ ಹೊರಬರುತ್ತಿದ್ದಂತೆಯೇ ಮಹಿಳೆ ಮೇಲೆ 15-20 ಜನರ ಗುಂಪು ಕಟ್ಟಿಗೆ, ಪೈಪ್ ಇನ್ನಿತರೆ ವಸ್ತುಗಳಿಂದ ಅಮಾನುಷ ಹಲ್ಲೆ ಮಾಡಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಬಳಿಕ ಮಾಧ್ಯಮಗಳಲ್ಲೂ ವರದಿಯಾಗಿದ್ದತ್ತು. ಈ ಹಿನ್ನೆಲೆ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಗ್ರಾಮಕ್ಕೆ ಭೇಟಿ ನೀಡಿದ್ದರು.ತಾವರಕೆರೆ ಜಾಮೀಯಾ ಮಸೀದಿ ಬಳಿ ಘಟನಾ ಸ್ಥಳಕ್ಕೆ ಚನ್ನಗಿರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಸೇರಿದಂತೆ ಅಧಿಕಾರಿಗಳ ಸಮೇತ ಭೇಟಿ ನೀಡಿದ್ದ ಡಾ.ಅರ್ಚನಾ ಮಜುಂದಾರ್ ಅವರು, ಸಂತ್ರಸ್ಥ ಮುಸ್ಲಿಂ ಮಹಿಳೆಗೆ ಸಾಂತ್ವನ ಹೇಳಿ, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು.
6 ಜನರ ಬಂಧನ ಶ್ಲಾಘನೀಯ:ಅನಂತರ ಮುಸ್ಲಿಂ ಸಮುದಾಯದ ವಿಶೇಷ ಸಭೆಯಲ್ಲಿ ಮಾತನಾಡಿದ ಡಾ.ಅರ್ಚನಾ ಮಜುಂದಾರ್, ಏ.9ರಂದು ಮಹಿಳೆಯ ವಿರುದ್ಧ ಜಾಮೀಯಾ ಮಸೀದಿಯಲ್ಲಿ ದೂರು ದಾಖಲಿಸಿ, ಮಸೀದಿಯಿಂದ ಹೊರಬಂದ ಗುಂಪಿನಲ್ಲಿ ಹತ್ತಾರು ಜನ ಸೇರಿ, ಆಕೆಗೆ ಹಲ್ಲೆ ಮಾಡಿದ್ದು ಅಕ್ಷಮ್ಯ ಮತ್ತು ಖಂಡನೀಯ ಘಟನೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, 6 ಜನರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಮಹಿಳೆಯರನ್ನು ಭಾರತದಲ್ಲಿ ಗೌರವದಿಂದ ಕಾಣಲಾಗುತ್ತದೆ. ಅಂತಹ ಗೌರವ ಎಲ್ಲರೂ ಕಾಪಾಡಿಕೊಂಡು ಹೋಗಬೇಕು. ಎಲ್ಲರಿಗೂ ಸಂವಿಧಾನದಲ್ಲಿ ಗೌರವದಿಂದ ಬಾಳುವ ಹಕ್ಕು ಇದೆ. ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಶೋಷಣೆ ಮಾಡುವುದು, ಪೈಶಾಚಿಕ ಕೃತ್ಯ ಎಸಗುವುದನ್ನು ಮಾಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತಪ್ಪಿದ್ದಲ್ಲ. ಇದೇ ತಾವರಕೆರೆ ಗ್ರಾಮದ ಮಹಿಳೆ ಮೇಲೆ ನಡೆದ ಕುಕೃತ್ಯ ಸೋಷಿಯಲ್ ಮೀಡಿಯಾಗಳಲ್ಲಿ ದೇಶ, ವಿದೇಶಗಳಲ್ಲಿ ಹರಿದಾಡುತ್ತಿದೆ. ಅದನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆಗೆ ಕೇಂದ್ರ ಸರ್ಕಾರ, ಆಯೋಗದ ಸೂಚನೆ ಮೇರೆಗೆ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದು ಅವರು ತಿಳಿಸಿದರು.ತಾವರಕೆರೆ ಘಟನೆ ನಿಜಕ್ಕೂ ಅಮಾನವೀಯವಾಗಿದೆ. ಬುರ್ಖಾ ಧರಿಸಿದ್ದ ಮಹಿಳೆಗೆ ಹತ್ತಾರು ಪುರುಷರು ಹಲ್ಲೆ ಮೂಲಕ ತಮ್ಮ ಪೌರುಷ ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂಥದ್ದನ್ನೆಲ್ಲಾ ಈ ನೆಲದ ಕಾನೂನು, ಸಂವಿಧಾನ ಸಹಿಸುವುದೂ ಇಲ್ಲ. ಮುಂದಿನ ದಿನಗಳಲ್ಲಿ ಇಂತಹ ಗಟನೆಗಳು ನಡೆಯುವುದಕ್ಕೆ ಬಿಡುವುದಿಲ್ಲ. ಸಮಾಜದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ದೈಹಿಕವಾಗಿ ಆಕೆ ಬಲಿಷ್ಠವಾಗಿಲ್ಲದೇ ಇರಬಹುದು. ಆದರೆ, ಮಾನಸಿಕವಾಗಿ ಅತ್ಯಂತ ಗಟ್ಟಿ ಇರುತ್ತಾಳೆ ಎಂದು ಹೇಳಿದರು.
ಪುರುಷರು, ಯುವಜನರು, ಮಹಿಳೆಯರು ಇಂತಹ ದೌರ್ಜನ್ಯದ ಘಟನೆಗಳು ನಡೆದಾಗ ಸುಮ್ಮನೇ ಕೂಡಬಾರದು. ನಿಮ್ಮಿಂದ ದೌರ್ಜನ್ಯ ತಡೆಯಲಾಗದಿದ್ದರೆ ಸಮೀಪದ ಪೊಲೀಸ್ ಠಾಣೆ, ಮಹಿಳಾ ಆಯೋಗ ಗಮನಕ್ಕೆ ತನ್ನಿ. ಮಹಿಳೆಯರಿಗಾಗಿ ಸರ್ಕಾರ ಸಾಕಷ್ಟು ಕಾನೂನು ರೂಪಿಸಿದೆ. ಸಂತ್ರಸ್ಥರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸ್ ಇಲಾಖೆ, ಕಾನೂನು, ಸರ್ಕಾರ, ಮಹಿಳಾ ಆಯೋಗ ಮಾಡುತ್ತವೆ. ಯಾವುದೇ ಅಂಜಿಕೆ, ಅಳುಕು ಇಲ್ಲದೇ ಕಾನೂನು ನೆರವನ್ನು ಪಡೆಯಬೇಕು ಎಂದು ಸಂತ್ರಸ್ಥ ಮಹಿಳೆ ಸೇರಿದಂತೆ ಸಭೆಯಲ್ಲಿದ್ದವರಿಗೆ ಡಾ.ಅರ್ಚನಾ ಸಲಹೆ ನೀಡಿದರು.ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ:
ಸಂತ್ರಸ್ಥರು ಜೀವನ ನಡೆಸುವುದು ಕಷ್ಟವಾಗಿದೆ. ಓರ್ವ ಸಂತ್ರಸ್ಥೆಗೆ ಇಬ್ಬರು ಮಕ್ಕಳಿವೆ. ಅಂಥವರಿಗೆ ಆಯೋಗದಿಂದ ಅಗತ್ಯ ನೆರವು ಕಲ್ಪಿಸಲಾಗುವುದು. ಹೆಣ್ಣುಮಕ್ಕಳಿಗೆ ಉತ್ತಮವಾಗಿ ಓದಿಸಿ, ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪ್ರೋತ್ಸಾಹಿಸಿ. ಪ್ರಾಪ್ತ ವಯಸ್ಕರಾಗುವವರೆಗೂ ಮದುವೆ ಮಾಡಬೇಡಿ. ಮಕ್ಕಳಿಗೆ ಸರಿಯಾಗಿ ಓದಿಸಿ, ಉತ್ತಮ ಭವಿಷ್ಯ ಕಟ್ಟಿಕೊಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಗ್ರಾಮಸ್ಥರಿಗೆ ತಿಳಿಸಿದರು.ಈ ಸಂದರ್ಭ ಚನ್ನಗಿರಿ ತಹಸೀಲ್ದಾರ್ ಎನ್.ಜೆ.ನಾಗರಾಜ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರೂಪ್ಲಿ ಬಾಯಿ, ಸಿಡಿಪಿಒ ನಿರ್ಮಲಾ ಬಾಯಿ, ಸಮಾಜದ ಮುಖಂಡರು, ಸಮಾಜದ ಹಿರಿಯರು, ಗ್ರಾಮದ ಮಹಿಳೆಯರು ಇದ್ದರು.
- - -(ಬಾಕ್ಸ್) * ಕಾರಿಗೆ ಅಡ್ಡ ನಿಂತು ಮಹಿಳೆ ಪ್ರತಿಭಟನೆ ದಾವಣಗೆರೆ: ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ. ಅರ್ಜನಾ ಮಜುಂದಾರ್ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿ, ವಾಪಸ್ಸಾಗಲು ತಮ್ಮ ವಾಹನದಲ್ಲಿ ಕುಳಿತರು. ಆಗ ಗ್ರಾಮದ ಮಹಿಳೆಯೊಬ್ಬರು ಆಯೋಗ ಸದಸ್ಯರ ಕಾರಿಗೆ ಅಡ್ಡ ನಿಂತು ಪ್ರತಿಭಟಿಸಿದರು.
ತಾವರಕೆರೆ ಗ್ರಾಮದ ಮುಸ್ಲಿಂ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಚನ್ನಗಿರಿ ಪೊಲೀಸರು ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲದವರ ವಿರುದ್ಧವೂ ಕೇಸ್ ಮಾಡಿ, ಬಂಧಿಸಿದ್ದಾರೆ. ತಕ್ಷಣವೇ ಬಂಧಿತರನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿದರು.ಘಟನೆ ಬಗ್ಗೆ ಮಾಹಿತಿ ಇಲ್ಲದ ಮಹಿಳೆ ವಾಹನಕ್ಕೆ ಅಡ್ಡ ಬಂದಿದ್ದರಿಂದ ಸ್ವಲ್ಲ ಹೊತ್ತು ಅಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಆಯೋಗ ಸದಸ್ಯರ ಕಾರಿಗೆ ಅಡ್ಡ ಬಂದಿದ್ದ ಮಹಿಳೆಯನ್ನು ತಕ್ಷಣವೇ ಪೊಲೀಸರು ಪಕ್ಕಕ್ಕೆ ಕರೆ ತಂದು, ವಾಹನ ಮುಂದೆ ಸಾಗಲು ಅನುವು ಮಾಡಿಕೊಟ್ಟರು.
- - --28ಕೆಡಿವಿಜಿ3:
ಚನ್ನಗಿರಿ ತಾಲೂಕಿನ ತಾವರಕೆರೆಗೆ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಸೋಮವಾರ ಭೇಟಿ ನೀಡಿ, ಮುಸ್ಲಿಂ ಮುಖಂಡರು, ಸಂತ್ರಸ್ಥ ಮಹಿಳೆಯಿಂದ ಅಹವಾಲು ಆಲಿಸಿದರು. ಎಎಸ್‌ಪಿ ಸ್ಯಾಮ್ ವರ್ಗೀಸ್ ಇನ್ನಿತರ ಅಧಿಕಾರಿಗಳು ಇದ್ದರು.