ವೈದ್ಯನ ಮೇಲೆ ಮಹಿಳೆ ಹಲ್ಲೆ: ಸಿಬ್ಬಂದಿ ಪ್ರತಿಭಟನೆ

| Published : Sep 11 2024, 01:05 AM IST

ಸಾರಾಂಶ

ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಸಿಬ್ಬಂದಿಯನ್ನು ಉದ್ದೇಶಿಸಿ ಸರ್ಜನ್‌ ಡಾ.ಮೋಹನ್‌ಕುಮಾರ್‌ ಮಾತನಾಡಿದರು.

ಮಹಿಳೆ, ಸಹೋದರನ ಬಂಧನ । ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರತಿ ದೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರಿಗೆ ಮಹಿಳೆಯೋರ್ವರು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದ್ದು, ಈ ಸಂಬಂಧ ಹಲ್ಲೆ ನಡೆಸಿರುವ ಮಹಿಳೆ ಹಾಗೂ ಅವರ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

ಇರ್ಫಾನ್‌ ಅವರ ಮೇಲೆ ಹಲ್ಲೆಯಾಗಿದ್ದು, ಗಾಯಗೊಂಡಿದ್ದ ಅವರು, ಚಿಕಿತ್ಸೆಗಾಗಿ ಸಹೋದರಿ ತಸ್ಲಿಂ ಅವರೊಂದಿಗೆ ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ್ದರು.

ತುರ್ತು ಘಟಕದಲ್ಲಿ ಕರ್ತವ್ಯದಲ್ಲಿದ್ದ ಡಾ.ವೆಂಕಟೇಶ್ ಅವರು ಇರ್ಫಾನ್‌ ಅವರಿಗೆ ಚಿಕಿತ್ಸೆ ನೀಡಿ, ಬಳಿಕ ಅದೇ ಸ್ಥಳದಲ್ಲಿರುವ ಕೊಠಡಿಯಲ್ಲಿ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಾಲೋಚನೆ ನಡೆಸಿರುವ ವೇಳೆ ತಸ್ಲಿಂ ಅವರು ದಿಢೀರನೇ ಹಲ್ಲೆ ನಡೆಸಿ ಚಪ್ಪಲಿಯಿಂದ ಹೊಡೆದಿದ್ದಾರೆ.

ಈ ವಿಷಯ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಯುತ್ತಿದ್ದಂತೆ ಕರ್ತವ್ಯ ಮೊಟಕುಗೊಳಿಸಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದರು. ನಂತರ ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ.ಮೋಹನ್‌ಕುಮಾರ್‌ ವೈದ್ಯರೊಂದಿಗೆ ಎಸ್‌ಪಿ ಕಚೇರಿಗೆ ತೆರಳಿ ಎಎಸ್‌ಪಿ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಆಸ್ಪತ್ರೆಗೆ ಆಗಮಿಸಿದ ಎಎಸ್‌ಪಿ ಕೃಷ್ಣಮೂರ್ತಿ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ವೈದ್ಯರ ಹಾಗೂ ಸಿಬ್ಬಂದಿ ರಕ್ಷಣೆಗೆ ನಾವಿದ್ದೇವೆ. ಆಸ್ಪತ್ರೆಯಲ್ಲಿ ಈಗಾಗಲೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ರೋಗಿಗಳ ಹಿತದೃಷ್ಟಿಯಿಂದ ಪ್ರತಿಭಟನೆಯನ್ನು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.

ಆದರೆ ಪ್ರತಿಭಟನಾಕಾರರು ಹಲ್ಲೆ ನಡೆಸಿರುವ ಮಹಿಳೆಯನ್ನು ಬಂಧಿಸುವವರೆಗೂ ಹಿಂದೆ ಸರಿಯಲ್ಲ ಆಗ್ರಹಿಸಿದರು. ಬಳಿಕ ಆಸ್ಪತ್ರೆಯಿಂದ ಮೆರವಣಿಗೆ ಹೊರಟ ವೈದ್ಯರು ಹಾಗೂ ಸಿಬ್ಬಂದಿ ನಗರ ಪೊಲೀಸ್‌ ಠಾಣೆಯ ಎದುರು ಧರಣಿ ಕುಳಿತರು. ಇವರಿಗೆ ಕನ್ನಡ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಸಾಥ್‌ ನೀಡಿದರು.

ಡಾ.ವೆಂಕಟೇಶ್ ನೀಡಿರುವ ದೂರಿನನ್ವಯ ಮಹಿಳೆ ಹಾಗೂ ಆತನ ಸಹೋದರನನ್ನು ಬಂಧಿಸಿರುವ ವಿಷಯವನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಾ ನಿರತರಿಗೆ ತಿಳಿಸುತ್ತಿದ್ದಂತೆ ವೈದ್ಯರು ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದರು.

ಡಾ.ವೆಂಕಟೇಶ್‌ ನೀಡಿರುವ ದೂರಿನನ್ವಯ ತಸ್ಲೀಂ, ಇರ್ಫಾನ್‌ ವಿರುದ್ಧ ಭಾರತೀಯ ದಂಡ ಸಂಹಿತೆ 352, 115(2), 132,133, 52 ಹಾಗೂ ಇತರೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಪ್ರತಿ ದೂರು

ತಮ್ಮ ಸಹೋದರ ಇರ್ಫಾನ್‌ಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ವೆಂಕಟೇಶ್‌ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಸ್ಲೀಂ ಅವರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ವೈದ್ಯರು ಕೊಟ್ಟಿರುವ ದೂರಿನಲ್ಲಿ ಏನಿದೆ?

ಮಂಗಳವಾರ ಬೆಳಗ್ಗೆ 10:45 ಸುಮಾರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇರ್ಫಾನ್‌, ತಸ್ಲೀಂ ಹಾಗೂ ಅವರ ಸಂಬಂಧಿಕರು ತುರ್ತು ನಿಗಾ ಘಟಕಕ್ಕೆ ಇರ್ಫಾನ್‌ ಮೇಲೆ ಯಾರೋ ಹಲ್ಲೆ ಮಾಡಿದ್ದ ಸಂಬಂಧವಾಗಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು, ಆಗ ಕೂಡಲೇ ಅವರಿಗೆ ಎಂಎಲ್‌ಸಿ ಮಾಡಿಕೊಂಡು ಒಳ ರೋಗಿಯಾಗಿ ತುರ್ತು ನಿಗಾ ಘಟಕದಲ್ಲೇ ದಾಖಲು ಮಾಡಿ ಎಂದು ಹೇಳಿದ, ನಂತರ ಬೇರೆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರ ಸಮಾಲೋಚನಾ ಕೊಠಡಿಗೆ ತೆರಳುತ್ತಿದ್ದಾಗ ತಸ್ಲೀಂ ಎಂಬ ಮಹಿಳೆ ರೋಗಿಯ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಕಾರಣ ಇಲ್ಲದೆ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಶರ್ಟ್‌ನ ಪಟ್ಟಿ ಹಿಡಿದು ಹಲ್ಲೆ ನಡೆಸಿ, ಚಪ್ಪಲಿಯಿಂದ ಹೊಡೆದಿದ್ದಾರೆ. ಆಗ ಇರ್ಫಾನ್‌ ಹಾಗೂ ಅವರ ಜತೆಯಲ್ಲಿದ್ದವರು ಸಹ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ವೈದ್ಯ ವೆಂಕಟೇಶ್‌ ತಿಳಿಸಿದ್ದಾರೆ.