ಗಂಡನ ಅಕ್ಕನ ಮನೆಯಲ್ಲಿ ಮಲಗಿದ್ದ ವೇಳೆ ಯಾರೋ ಇಬ್ಬರು ಮನೆಗೆ ನುಗ್ಗಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಗಂಡನ ಮನೆಯವರೇ ಸುಫಾರಿ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದು ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದ ಜಿಲ್ಲಾ ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ನಗರದ ಕಂದವಾರ ಬಾಗಿಲಿನಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಮಹಿಳೆಯೊಬ್ಬರನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದ್ದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

ವಿವಾಹಿತೆ ಪುಷ್ಪಲತಾ (23) ಕೊಲೆಯಾದ ದುರ್ದೈವಿ. ಗಂಡನ ಅಕ್ಕನ ಮನೆಯಲ್ಲಿ ಮಲಗಿದ್ದ ವೇಳೆ ಯಾರೋ ಇಬ್ಬರು ಮನೆಗೆ ನುಗ್ಗಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಗಂಡನ ಮನೆಯವರೇ ಸುಫಾರಿ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದು ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದ ಜಿಲ್ಲಾ ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಏನಿದು ಕಥೆ?

ಬೆಂಗಳೂರು ಮೂಲದ ಪುಷ್ಪಲತಾ ಎಂಬುವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಕಂದವಾರ ಬಾಗಿಲಿನ ಭರತ್ ಎಂಬುವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಮದುವೆಯಾದ ಮೂರು ತಿಂಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆಕೆ ತವರು ಮನೆ ಸೇರಿದ್ದಳು ಎನ್ನಲಾಗಿದೆ.

ಸಂಧಾನದ ನಂತರ ಮತ್ತೆ ಗಂಡನ ಮನೆಗೆ ಕಳಿಸಲಾಗಿತ್ತು. ಮದುವೆ ಆದಾಗಿನಿಂದಲೂ ಪುಷ್ಪಲತಾಗೆ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರು ಎಂದು ಸಂಬಂಧಿಕರು ದೂರಿದ್ದಾರೆ. ಗಂಡ ಭರತ್ ಮದುವೆಯಾಗಿ ಏಳು ತಿಂಗಳಿಗೆ ಜಗಳ ತೆಗೆದು ಪುಷ್ಪಲತಾಳನ್ನು ಮನೆಯಿಂದ ಹೊರ ಹಾಕಿದ್ದು ಈ ಬಗ್ಗೆ ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಲಾಗಿತ್ತು ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.

ಮೃತಳ ಮಾವ ನರಸಿಂಹಮೂರ್ತಿ ಹೇಳುವಂತೆ ನಮ್ಮ ಕುಟುಂಬವು ಕೇರಳದ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಲ್ಲಿಗೆ ತೆರಳಲು ಮಗ, ಸೊಸೆಯನ್ನು ಕೂಡ ಕರೆದೆವು. ಆಕೆ ನೀವು ಹೋಗಿ ಬನ್ನಿ ಎಂದು ಹೇಳಿದ ಕಾರಣ ಪ್ರತ್ಯೇಕ ವಾಸವಿದ್ದವರನ್ನು ಒಬ್ಬಂಟಿಯೆಂಬ ಕಾರಣಕ್ಕೆ ನಮ್ಮ ಮನೆಗೆ ಬಿಟ್ಟು ಗುರುವಾರ ಸಂಜೆ ದೇವಾಲಯಕ್ಕೆ ತೆರಳಿದೆವು. ಆದರೆ ಮಾರ್ಗಮಧ್ಯೆ ಈ ಘಟನೆಯ ಮಾಹಿತಿ ತಿಳಿಯಿತು. ಕೂಡಲೇ ಕೇರಳದಿಂದ ವಾಪಸಾದೆವು ಎನ್ನುತ್ತಾರೆ.

ಗುರುವಾರ ರಾತ್ರಿ ಯಾರೋ ಇಬ್ಬರು ಅಪರಿಚಿತರು ಮನೆಗೆ ನುಗ್ಗಿದ್ದಾರೆ. ಅಲ್ಲಿದ್ದವರಿಗೆ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಸೊಸೆಯನ್ನು ಕೊಲೆಗೈದು ಚಿನ್ನಾಭರಣ ಕದ್ದೊಯ್ದು ಪರಾರಿಯಾಗಿದ್ದಾರೆ ಎಂದು ನಮ್ಮ ಸೊಸೆ ಜೊತೆ ಇದ್ದ ಮಗಳು ಮತ್ತು ನಮ್ಮ ತಾಯಿ ತಿಳಿಸಿದ್ದಾರೆ ಎಂದು ನರಸಿಂಹಮೂರ್ತಿ ಮಾಧ್ಯಮಕ್ಕೆ ಹೇಳಿದ್ದಾರೆ.

ಪೂರ್ವಯೋಜಿತ ಕೃತ್ಯ:

ಆದರೆ ಮೃತಳ ಸಂಬಂಧಿಕರು ಹೇಳುವಂತೆ ರಾತ್ರಿ ಕಳ್ಳರು ಬಂದು ಮಲಗಿದ್ದವರನ್ನು ಕೊಲೆ ಮಾಡಿದ್ದಾರೆ ಎನ್ನುವುದು ನಿಜವೇ ಆಗಿದ್ದಲ್ಲಿ ರಾತ್ರಿ ಮನೆಯಲ್ಲಿದ್ದ ಬೇರೆ ಯಾರನ್ನು ಕೊಲೆ ಮಾಡದೆ ಪುಷ್ಪಲತಾ ಅವರನ್ನೇ ಹೇಗೆ ಕೊಲೆ ಮಾಡಲು ಸಾಧ್ಯ? ಇದು ಪೂರ್ವಯೋಜಿತ ಕೃತ್ಯ ಎಂಬುದು ಪುಷ್ಪಲತಾ ತಾಯಿ ಮತ್ತು ಕುಟುಂಬಸ್ಥರ ಆರೋಪವಾಗಿದೆ. ಪುಷ್ಪಲತಾ ಅವರ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಕೊಲೆ ಆಗಿರುವ ಬೆಡ್ ಮೇಲೆ ರಕ್ತದ ಕಲೆಗಳು ಕಂಡುಬಂದಿದೆ.

ಪತಿ, ತಂದೆ ವಶಕ್ಕೆ:

ಘಟನೆಯ ಮಾಹಿತಿ ತಿಳಿದ ತಕ್ಷಣ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈಗಾಗಲೇ ಗಂಡ ಶರತ್ ಮತ್ತು ಅವರ ತಂದೆ ಪೊಲೀಸರ ವಿಚಾರಣೆಯಲ್ಲಿದ್ದಾರೆಂದು ತಿಳಿದು ಬಂದಿದೆ.ಸಿಕೆಬಿ-2 ಮೃತ ಪುಷ್ಪಲತಾ ಮತ್ತು ಗಂಡನ ಪೋಟೋ..