ಆನ್‌ಲೈನ್ ಮೂಲಕ ಷೇರು ವ್ಯವಹಾರ ಮಾಡುವ ಆ್ಯಪ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ 11.75 ಲಕ್ಷ ರು. ವಂಚಿಸಿದ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಉಡುಪಿ: ಆನ್‌ಲೈನ್ ಮೂಲಕ ಷೇರು ವ್ಯವಹಾರ ಮಾಡುವ ಆ್ಯಪ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ 11.75 ಲಕ್ಷ ರು. ವಂಚಿಸಿದ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಇಲ್ಲಿನ ಸಹನಾ ಎಂಬವರು ಆನ್‌ಲೈನ್ ಟ್ರೇಡಿಂಗ್ ಕುರಿತು ತಿಳಿದುಕೊಳ್ಳುವ ಉದ್ದೇಶದಿಂದ ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಸುಮಾರು 15 ದಿನಗಳ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಅವರನ್ನು ವಾಟ್ಸಾಪ್ ಗುಂಪಿಗೆ ಸೇರಿಸಿದ್ದಾನೆ. ಆ ಗುಂಪಿನಲ್ಲಿ ಲಿಂಕ್ ಕಳುಹಿಸಿ, ಕೆವೈಸಿ ವಿವರಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ. ಬಳಿಕ ಟ್ರೇಡಿಂಗ್ ಮೂಲಕ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದು, ಆತ ಹೇಳಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಸಹನಾ ಅವರು ಮಾ. 6 ರಿಂದ 14ರವರೆಗೆ ಹಂತ ಹಂತವಾಗಿ ಒಟ್ಟು 11,75,000 ರು. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಯಾವುದೇ ಲಾಭಾಂಶ ನೀಡದೆ ಹೂಡಿಕೆ ಮಾಡಿದ ಹಣವನ್ನೂ ಹಿಂತಿರುಗಿಸದೆ ತಮಗೆ ಮೋಸ ಮಾಡಿರುವುದು ಅವರಿಗೆ ಗಮನಕ್ಕೆ ಬಂದಿದೆ.
ನಂತರ ಅವರು ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.