ಸಾರಾಂಶ
ಗಂಡು ಮಗುವಿಗೆ ಜನ್ಮನೀಡದ ನೀನು ಸಾಯಿ ಎನ್ನುತ್ತಿದ್ದ ಪತಿ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಬರಿ ಹೆಣ್ಣನ್ನೇ ಹೆರುವ ನೀನು ಭೂಮಿ ಮೇಲೆ ಇರಬಾರದು. ಸತ್ತು ಹೋಗುವುದು ಲೇಸು ಎಂದು ದಿನಾ ಹೊಡಿ, ಬಡಿ ಮಾಡುತ್ತಿದ್ದ ಗಂಡ ಮತ್ತು ಗಂಡನ ಮನೆಯವರ ಕಿರುಕುಳದಿಂದ ಮಹಿಳೆಯೋರ್ವಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದೆ.ನಾಲ್ಕು ವರ್ಷ, ಮೂರು ವರ್ಷ, ನಾಲ್ಕು ತಿಂಗಳ ಮುದ್ದಾದ ಪುತ್ರಿಯರನ್ನು ಹೊಂದಿರುವ ತಾಯಿ ಮನೆಯಲ್ಲಿಯೇ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಳ್ಳಾರಿ ಗ್ರಾಮದ ಹನುಮವ್ವ ಗುಮಗೇರಿ (25) ನೇಣಿಗೆ ಶರಣಾದ ನತದೃಷ್ಟೆ.ಮೃತಳ ತಂದೆ ಬಸಪ್ಪ ಕೋರಿ ನೀಡಿದ ದೂರನ್ನು ಆಧರಿಸಿ ಪತಿ ಗಣೇಶ ಗುಮಗೇರಿ ಹಾಗೂ ಆತನ ತಾಯಿ (ಅತ್ತೆ) ಯಲ್ಲವ್ವ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪತಿ ಗಣೇಶನನ್ನು ಬಂಧಿಸಲಾಗಿದೆ.
ಹೆಣ್ಣು ಹೆತ್ತಿದ್ದೇ ಕಾರಣ:ಮೃತಳ ತಂದೆ ಬಸಪ್ಪ ನೀಡಿರುವ ದೂರಿನಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ್ದಾರೆ. ಬರಿ ಹೆಣ್ಣು ಹೆರುವ ನೀನು ಸಾಯಿ ಎಂದು ಕಿರುಕುಳ ನೀಡಿದ್ದಾರೆ. ಇದೇ ವಿಷಯಕ್ಕೆ ಪ್ರತಿ ಬಾರಿ ನನ್ನ ತಂಗಿಯೊಂದಿಗೆ ಜಗಳವಾಡುತ್ತಿದ್ದರು. ಆಕೆ ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೇ ಆಕೆಯ ಜೀವಕ್ಕೆ ಕುತ್ತಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇಡೀ ಮನೆಯವರು ಸಹ ಈ ಬಗ್ಗೆ ಆಕ್ಷೇಪಿಸುತ್ತಿದ್ದರು. ಈ ವಿಷಯವನ್ನು ಮುಂದೆ ಮಾಡಿ ಹಿಂಸೆ ನೀಡುತ್ತಿದ್ದರು. ಇದನ್ನು ಸಹಿಸದೇ ಆಕೆ ನೇಣುಬಿಗಿದುಕೊಂಡು, ನಾಲ್ಕು ತಿಂಗಳ ಮಗು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾಳೆ ಎಂದರೆ ಆಕೆ ಎಂಥ ಹಿಂಸೆಯನ್ನು ಅನುಭವಿಸಿರಬೇಕು ಎಂದಿದ್ದಾರೆ.ಕುಡಿತದ ದಾಸನಾಗಿದ್ದ:ಎರಡನೇ ಬಾರಿಗೆ ಹೆಣ್ಣು ಮಗುವಾಗಿದ್ದರಿಂದ ಪತಿ ಗಣೇಶ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದನಂತೆ. ಆಗಿನಿಂದಲೇ ಕುಡಿತದ ದಾಸನಾಗಿದ್ದ. ನನಗೆ ಬರಿ ಹೆಣ್ಣು ಹೆರುವ ಪತ್ನಿ ಸಿಕ್ಕಿದ್ದಾಳೆ ಎನ್ನುತ್ತಿದ್ದ. ಮೂರನೇ ಮಗು ಸಹ ಹೆಣ್ಣಾಗಿದ್ದರಿಂದ ಪತ್ನಿಗೆ ವಿಪರೀತ ಹಿಂಸೆ ನೀಡಿದ್ದಾನೆ. ಬರಿ ಹೆಣ್ಣು ಹೆರುವ ನೀನು ಸಾಯುವುದೇ ಲೇಸು ಎಂದಿದ್ದಾನೆ. ಗಂಡುಮಗುವಿಗೆ ಜನ್ಮ ನೀಡದ ನೀನ್ಯಾಕೆ ನನಗೆ ಜೊತೆಯಾದೆ ಎಂದೆಲ್ಲ ಹಿಂಸಿಸಿದ್ದಾನೆ ಎನ್ನಲಾಗಿದೆ.
ಹೀಗಾಗಿಯೇ ಆಕೆ ನಾಲ್ಕು ತಿಂಗಳ ಮಗು ಮನೆಯಲ್ಲಿದ್ದರೂ ಸಹ ಅದಕ್ಕೆ ಹಾಲುಣಿಸಿ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸೋಮವಾರ ಮಧ್ಯಾಹ್ನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಿಷಯವನ್ನು ತವರು ಮನೆಯವರಿಗೆ ತಿಳಿಸಿದರೆ ತಕ್ಷಣಕ್ಕೆ ಅವರು ಬರಲು ತಮ್ಮೂರಿನಲ್ಲಿ ಇರಲಿಲ್ಲ. ಕನಕಗಿರಿ ತಾಲೂಕಿನ ಬೊಮ್ಮಸಾಗರ ಗ್ರಾಮದ ತವರು ಮನೆಯವರು ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ಅವರು ಬಂದ ಮೇಲೆ ಮಂಗಳವಾರ ನೇಣುಬಿಗಿದ ಸ್ಥಿತಿಯಲ್ಲಿದ್ದ ಶವ ತೆಗೆದಿದ್ದಾರೆ. ಬಳಿಕವೇ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿ, ಮಂಗಳವಾರ ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ಪೂರ್ಣಗೊಳಿಸಿದ್ದಾರೆ.
ಆರೋಪಿ ಬಂಧನ:ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಗಣೇಶನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಚಳ್ಳಾರಿ ಗ್ರಾಮದಲ್ಲಿ ಪತಿ ಹಾಗೂ ಕುಟುಂಬದವರ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪದೇ ಪದೇ ಹೆಣ್ಣು ಹೆರುತ್ತಾಳೆ ಎನ್ನುವ ಕಾರಣಕ್ಕೆ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ದೂರಿನಲ್ಲಿಯೇ ತಿಳಿಸಿದ್ದಾರೆ ಎಂದು ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ. ಸುರೇಶ ಮಾಹಿತಿ ನೀಡಿದ್ದಾರೆ.