ಕಲುಷಿತ ನೀರು ಸೇವಿಸಿ ಮಹಿಳೆ ಸಾವು ಪ್ರಕರಣ: ಮೂವರ ಅಮಾನತಿಗೆ ಶಿಫಾರಸು

| Published : Jan 09 2024, 02:00 AM IST / Updated: Jan 09 2024, 05:14 PM IST

ಸಾರಾಂಶ

ನಗರಸಭೆ ಪೌರಾಯುಕ್ತ ಬಿ.ಟಿ. ಬಂಡಿವಡ್ಡರ್, ಎಇಇ ಸತೀಶ್ ಹಾಗೂ ಜೆಇ ಖಾಜಿ ಅವರನ್ನು ಅಮಾನತುಗೊಳಿಸಲು ನಗರಾಭಿವೃದ್ಧಿ ಕಾರ್ಯದರ್ಶಿ ಅವರಿಗೆ ಸೋಮವಾರ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.

ಹೊಸಪೇಟೆ: ವಿಜಯನಗರ ಜಿಲ್ಲೆ ಹೊಸಪೇಟೆ ನಗರಸಭೆಯ ಕಾರಿಗನೂರಿನಲ್ಲಿ ಕಲುಷಿತ ನೀರು ಸೇವಿಸಿ 35 ಮಂದಿ ಅಸ್ವಸ್ಥಗೊಂಡು ಸೀತಮ್ಮ ಎಂಬ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಬಿ.ಟಿ. ಬಂಡಿವಡ್ಡರ್, ಎಇಇ ಸತೀಶ್ ಹಾಗೂ ಜೆಇ ಖಾಜಿ ಅವರನ್ನು ಅಮಾನತುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರು, ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ನಗರಸಭೆ ಪೌರಾಯುಕ್ತ ಬಿ.ಟಿ. ಬಂಡಿವಡ್ಡರ್, ಎಇಇ ಸತೀಶ್ ಹಾಗೂ ಜೆಇ ಖಾಜಿ ಅವರನ್ನು ಅಮಾನತುಗೊಳಿಸಲು ನಗರಾಭಿವೃದ್ಧಿ ಕಾರ್ಯದರ್ಶಿ ಅವರಿಗೆ ಸೋಮವಾರ ಪತ್ರ ಬರೆದು ಶಿಫಾರಸು ಮಾಡಿದ್ದಾರೆ. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ 15 ದಿನಗಳ ಹಿಂದೆಯೇ ಕ್ಲೋರಿನೇಷನ್‌ ಸಿಲಿಂಡರ್‌ ಖಾಲಿಯಾಗಿರುವುದು ಕಂಡುಬಂದಿದೆ.

ಜತೆಗೆ ಅಶುದ್ಧ ನೀರು ಪೂರೈಕೆ ಮಾಡಲಾಗಿದೆ. ಹಾಗಾಗಿ ಕಾರಣ ಕೇಳಿ ನೋಟಿಸ್‌ ಕೂಡ ಜಾರಿ ಮಾಡಿದ್ದು, ಸಮಂಜಸ ಉತ್ತರ ನೀಡದ ಹಿನ್ನೆಲೆಯಲ್ಲಿ ಸಾರ್ವಜನಿಕ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ್ಯತೆಯಿಂದ ಆಗಿರುವ ಕರ್ತವ್ಯಲೋಪಕ್ಕೆ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ- 1957ರ ನಿಯಮ 10(ಡಿ)ರಂತೆ ಕರ್ತವ್ಯದಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರು ಈ ಮೂವರು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲು ನಿರ್ದೇಶನ ನೀಡಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ದಿವಾಕರ್ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದು ಪ್ರಕರಣ ಮರುಕಳಿಸದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ನಿಗಾ ವಹಿಸುವಂತೆಯೂ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.35 ಜನರು ಅಸ್ವಸ್ಥ:

ಕಾರಿಗನೂರು ಪ್ರದೇಶದಲ್ಲಿ ಇದುವರೆಗೆ 35 ಜನ ವಾಂತಿ- ಭೇದಿಯಿಂದ ಅಸ್ವಸ್ಥರಾಗಿದ್ದು, ಈ ಪೈಕಿ ಸೀತಮ್ಮ ಎಂಬವರು ಮೃತಪಟ್ಟಿದ್ದಾರೆ. ಆರು ಜನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಡಿಸ್ಚಾರ್ಜ್‌ ಆಗಿದ್ದಾರೆ. ಕಾರಿಗನೂರು ಪ್ರದೇಶದಲ್ಲೇ ಆರೋಗ್ಯ ಇಲಾಖೆ ಕ್ಯಾಂಪ್‌ ಹಾಕಿದ್ದು, ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದೆ.

 ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸುವುದಕ್ಕೆ ನಗರಸಭೆಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಅಲ್ಲದೇ, ನಗರದ 11 ಟ್ಯಾಂಕರ್‌ಗಳಲ್ಲಿ ಪೂರೈಕೆ ಆಗುವ ನೀರನ್ನು ಪ್ರಯೋಗಾಲಯಕ್ಕೆ ರವಾನಿಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಡಳಿತ ಕೂಡ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದೆ.

ನಿಗಾ ವಹಿಸಲಾಗಿದೆ: ಮಹಿಳೆ ಮೃತಪಟ್ಟ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಮೂವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ನಗರದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ. ವಾಂತಿ-ಭೇದಿ ಪ್ರಕರಣ ಉಲ್ಬಣಗೊಳ್ಳದಂತೆ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್ ತಿಳಿಸಿದರು.