ನಗರದ ಬಿಜಿಟಿ ಮಾಂಸಾಹಾರಿ ಹೋಟೆಲ್‌ನಲ್ಲಿ ಗ್ರಾಹಕರಿಗೆ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾದ ಹಿನ್ನೆಲೆ ಆಹಾರ ಭದ್ರತೆ ಅಧಿಕಾರಿಗಳ ತಂಡ ಹೋಟೆಲ್ ಬಂದ್ ಮಾಡಿದ ಘಟನೆ ಇಲ್ಲಿ ನಡೆದಿದೆ. ಅಧಿಕಾರಿಗಳ ತಂಡದ ಭೇಟಿ ವೇಳೆ ಹೋಟೆಲ್ ಮಾಲೀಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಕನ್ನಡಪ್ರಭ ವಾರ್ತೆ, ಬಂಗಾರಪೇಟೆ

ನಗರದ ಬಿಜಿಟಿ ಮಾಂಸಾಹಾರಿ ಹೋಟೆಲ್‌ನಲ್ಲಿ ಗ್ರಾಹಕರಿಗೆ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾದ ಹಿನ್ನೆಲೆ ಆಹಾರ ಭದ್ರತೆ ಅಧಿಕಾರಿಗಳ ತಂಡ ಹೋಟೆಲ್ ಬಂದ್ ಮಾಡಿದ ಘಟನೆ ಇಲ್ಲಿ ನಡೆದಿದೆ. ಅಧಿಕಾರಿಗಳ ತಂಡದ ಭೇಟಿ ವೇಳೆ ಹೋಟೆಲ್ ಮಾಲೀಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಮಂಗಳವಾರ ಸಂಜೆ ಬಿಜಿಟಿ ಹೋಟೆಲ್ ನಲ್ಲಿ ನೆರಳೆಕೆರೆ ನಿವಾಸಿ ಲಲಿತಾ ಎಂಬಾಕೆ ಹೋಟೆಲ್‌ಲ್ಲಿ ಬಿರಿಯಾನಿ ಸೇವಿಸುವಾಗ ಸತ್ತ ಹಲ್ಲಿ ದೊರಕಿದೆ. ಇದರಿಂದ ಗಾಬರಿಯಾದ ಮಹಿಳೆ ಮಾಲೀಕ ರವಿ ಅವರ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ನಡುವೆ ಮಹಿಳೆ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿ ಸರ್ಕಾರಿ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆದಳು. ವಾಂತಿ ಭೇದಿ ಹತೋಟಿಗೆ ಬಾರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಹಾತ ಭದ್ರತೆ ಅಧಿಕಾರಿ ಸತೀಶರೆಡ್ಡಿ, ನಗರಸಭೆ ಆಯುಕ್ತ ಸತ್ಯನಾರಾಯಣ ಮತ್ತು ಸಿಬ್ಬಂದಿ ಘಟನೆ ನಡೆದ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿ ಹಲವು ನ್ಯೂನತೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಹೋಟೆಲ್‌ಗೆ ಬೀಗ ಹಾಕಿದ್ದಾರೆ.

ಹೈಡ್ರಾಮ: ಅಧಿಕಾರಿಗಳು ದಾಳಿಯ ಸಂದರ್ಭದಲ್ಲಿ ಹೋಟೆಲ್‌ ಮುಚ್ಚಲು ಯತ್ತಿಸಿದಾಗ ರವಿ ಹಾಗೂ ಅವರ ಬೆಂಬಲಿಗರು ಹೈಡ್ರಾಮ ಶುರು ಮಾಡಿದರು. ಇದಕ್ಕೆ ಬಗ್ಗದ ಅಧಿಕಾರಿಗಳು ಶೋಧ ನಡೆಸಿ ಲೋಪದೋಷಗಳ ಕುರಿತಾಗಿ ನೋಟಿಸ್ ನೀಡಿ ಹೋಟೆಲ್ ಬಂದ್‌ ಮಾಡಿದರು. ಈ ವೇಳೆ ಅಧಿಕಾರಿ ಮಾತನಾಡಿ ಬಿಜಿಟಿ ಹೋಟೆಲ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾದ ಮಾಹಿತಿ ಮೇರೆಗೆ ಹೋಟೆಲ್ ಪರಿಶೀಲಿಸಿದಾಗ ಆಹಾರ ಭದ್ರತಾ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪರೀಕ್ಷಗೆ ಕಳುಹಿಸಲಾಗುತ್ತದೆ, ಅದರ ವರದಿ ಆದರದ ಮೇಲೆ ಹೋಟೆಲ್ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಆಹಾರ ನಿರೀಕ್ಷಕ ಹರೀಶ್, ಪೊಲೀಸ್ ಇನ್‌ಸ್ಪೆಕ್ಟರ್ ರವಿಕುಮಾರ್ ಇದ್ದರು.