ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮಹಿಳೆ ತ್ಯಾಗಮೂರ್ತಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿಯ ಪ್ರತಿರೂಪ ವಾಗಿದ್ದಾಳೆ ಎಂದು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ, ಲೇಖಕಿ ಡಾ. ಕಾವೇರಿ ಪ್ರಕಾಶ್ ಹೇಳಿದರು.ಇಲ್ಲಿನ ಮಹಿಳಾ ಸಮಾಜದಲ್ಲಿ ಮಂಗಳವಾರ ಮಹಿಳಾ ಸಮಾಜ ಮತ್ತು ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗಿನ ಹೆಣ್ಣು ಮಕ್ಕಳು ವ್ಯವಸ್ಥಿತವಾದ ಬದುಕನ್ನು ಮಹಿಳೆ ಕಟ್ಟಿಕೊಳ್ಳಬಲ್ಲಳು. ಕೊಡಗಿನ ಹೆಣ್ಣು ಮಕ್ಕಳು ದಿಟ್ಟತನ ಹೊಂದಿದವರು. ಇತರರಿಗೆ ಬದುಕು ಕಟ್ಟಿಕೊಡುವ ಹೆಣ್ಣು ಮಕ್ಕಳು ಬೇರೆಯವರಿಗೆ ಒಂದು ಕಲೆಯನ್ನು ಹೇಳಿಕೊಡುವ ಹೆಣ್ಣು ಮಕ್ಕಳು ಎಂದ ಶ್ಲಾಘಿಸಿದರು.ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಮಹಿಳೆಯರು ಸಮಾಜದಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸಬೇಕು. ಇದಕ್ಕಾಗಿ ಯಾರ ಹೊಗಳಿಕೆ ಬೇಕಿಲ್ಲ. ಕ್ಷಣಿಕ ಜೀವನದಲ್ಲಿ ಒಂದಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕಷ್ಟಪಟ್ಟು ತಮ್ಮ ಅಸ್ಮಿತಿಯನ್ನು ಗಳಿಸಿಕೊಳ್ಳಬೇಕು. ನಮ್ಮ ಪ್ರತಿಭೆಯನ್ನು ನಾವು ಕಾಪಾಡಿಕೊಳ್ಳಬೇಕು ಎಂದ ಅವರು. ಯಾವುದೇ ಕ್ಷೇತ್ರದ ಸಾಧನೆಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಇನ್ನಷ್ಟು ಸಾಧಿಸಬೇಕಿದೆ. ಸಮಾಜದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುವಂತಾಗಬೇಕು ಎಂದರು.
ಮುಖ್ಯ ಅತಿಥಿ ಡಾ ಮಾದಂಡ ಪ್ರಿಯದರ್ಶಿನಿ ಮಾತನಾಡಿ ಒಂದು ಕುಟುಂಬದ ಆಧಾರ ಸ್ಥಂಭವಾಗಿರುವ ಮಹಿಳೆಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ಮಹಿಳೆಯರು ಇಂದು ಸಾಕಷ್ಟು ವಿದ್ಯಾವಂತರಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಮಹಿಳೆಯರು ಜಾಗೃತರಾಗಿರಬೇಕು ಎಂದರು. ಮಾರಕ ಕ್ಯಾನ್ಸರ್ ನಂತರ ರೋಗಗಳು ಬಾಧಿಸುವ ಮೊದಲೇ ಮುನ್ನಚ್ಚರಿಕೆಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದ ಅವರು ಆರೋಗ್ಯದ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ಮನದಟ್ಟಾಗುವಂತೆ ವಿವರಿಸಿದರು .ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ವಹಿಸಿ ತನ್ನ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.
ಈ ಸಂದರ್ಭ ಮಹಿಳಾ ಸಮಾಜದ ಉಪಾಧ್ಯಕ್ಷೆ ಬೊಪ್ಪಂಡ ಶೈಲಾ ಬೋಪಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಲಯನ್ ಕಾರ್ಯದರ್ಶಿ ಕಾಂಡಂಡ ರೇಖಾ ಪೊನ್ನಣ್ಣ, ಮಹಿಳಾ ಸಮಾಜ ನಿರ್ದೇಶಕಿಯರಾದ ಕೆಟೋಳಿರ ಶಾರದಾ ಪಳಂಗಪ್ಪ , ಬಿದ್ದಾಟಂಡ ಗಿರಿಜಾ ಬೋಪಣ್ಣ, ಅಪ್ಪಾರಂಡ ಡೇಜಿ ತಿಮ್ಮಯ್ಯ, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ , ಕಾರ್ಯದರ್ಶಿ ರಾಜೇಶ್ವರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಪಾಲಚಂಡ ಸೀಮಾ ಪ್ರತಾಪ್ ಪ್ರಾರ್ಥಿಸಿದರು. ರೇಷ್ಮಾ ಉತ್ತಪ್ಪ ಸ್ವಾಗತಿಸಿದರು. ಬೊಳ್ಳಮ್ಮ ನಾಣಯ್ಯ ನಿರೂಪಿಸಿದರು. ಶೈಲಾ ಬೋಪಯ್ಯ ವಂದಿಸಿದರು.