ಕನಕಗಿರಿ: ಪಟ್ಟಣವನ್ನು ಬೆಚ್ಚಿ ಬೀಳಿಸಿದ್ದ ಇಲ್ಲಿನ ೫ನೇ ವಾರ್ಡ್‌ನ ನಿರ್ಮಾಣ ಹಂತದ ಮನೆಯಲ್ಲಿ ವಿವಾಹಿತ ಮಹಿಳೆಯನ್ನು ಕೊಂದು ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಕೊಲೆಯಾದ ಮಹಿಳೆಯ ಗುರುತು ಪತ್ತೆಯಾಗಿದ್ದು, ಶಂಕಿತ ಆರೋಪಿಯನ್ನು ಸಹ ಜೂ. 10ರ ಬುಧವಾರದಂದೇ ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮವಾರ ತಡರಾತ್ರಿ ನಡೆದ ಘಟನೆಯಿಂದ ಪಟ್ಟಣದ ಜನತೆ ಆತಂಕಗೊಂಡಿತ್ತು. ಮಹಿಳೆಯ ಗುರುತು ಪತ್ತೆ ಹಚ್ಚುವ ಜತೆಗೆ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಪ್ರಕರಣ ಭೇದಿಸುವುದಕ್ಕಾಗಿ ಮೂರು ಪ್ರತ್ಯೇಕ ತಂಡ ರಚಿಸಿದ್ದು, ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿತನನ್ನು ಬಂಧಿಸಲಾಗಿದ್ದು, ಆತನ ಮೂಲಕ ಕೊಲೆಯಾದ ಮಹಿಳೆ ಯಾರೆಂಬುದನ್ನು ತಿಳಿದುಕೊಳ್ಳಲು ಪೊಲೀಸರು ಯಶಸ್ವಿಯಾಗಿದ್ದಾರೆ.ಕಾರಟಗಿ ಮುೂಲದ ರತ್ನಮ್ಮ ಮಲ್ಲಿಕಾರ್ಜುನ ಹತ್ಯೆಗೀಡಾದ ಮಹಿಳೆ. ಇವರು ಕ್ಯಾಟರಿಂಗ್ ನಡೆಸುತ್ತಿದ್ದರು. ವಿಧವೆಯಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರು. ಇವರಿಗೆ ಇಬ್ಬರು ಪುತ್ರಿಯರಿದ್ದು, ಮದುವೆ ಮಾಡಿಕೊಡಲಾಗಿದೆ. ಪುತ್ರ ಸಂಬಂಧಿಯೊಬ್ಬರ ಮನೆಯಲ್ಲಿದ್ದು ಕುಷ್ಟಗಿ ತಾಲೂಕಿನ ಶಾಲೆಯೊಂದರಲ್ಲಿ ಓದುತ್ತಿದ್ದಾನೆ. ರತ್ನಮ್ಮ ಕಾರಟಗಿಯಲ್ಲೇ ಒಂಟಿಯಾಗಿದ್ದು ಕ್ಯಾಟರಿಂಗ್ ನಡೆಸುತ್ತಿದ್ದಳು.
ಬುಧವಾರ ಕುಟುಂಬಸ್ಥರು ಠಾಣೆಗೆ ಆಗಮಿಸಿ ಸಿಸಿ ಟಿವಿಯಲ್ಲಿನ ದೃಶ್ಯ ವೀಕ್ಷಿಸಿ ಖಚಿತಪಡಿಸಿಕೊಂಡಿದ್ದಾರೆ. ಆರೋಪಿ ಕುಷ್ಟಗಿ ತಾಲೂಕಿನವ ಎಂದು ಹೇಳಲಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮನೆಯ ಮಾಲೀಕ ಸಂಗನಗೌಡ ನೀಡಿರುವ ದೂರಿನ ಪ್ರಕಾರ ಮಹಿಳೆಯ ಕೊಲೆ ಹಾಗೂ ಸಾಕ್ಷ್ಯ ನಾಶಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ಪ್ರಕರಣ ದಾಖಲಿಸಿದ್ದು. ಇದೀಗ ಕೊಲೆಯಾದ ಮಹಿಳೆ ಪರಿಶಿಷ್ಟ ವರ್ಗಕ್ಕೆ ಸೇರಿದ್ದರಿಂದ ಹೆಚ್ಚುವರಿಯಾಗಿ ಅಟ್ರಾಸಿಟಿ ಕೇಸ್ ಸೇರ್ಪಡೆ ಮಾಡಲಾಗುವುದು ಎಂದು ಠಾಣಾಧಿಕಾರಿ ವಿ.ನಾರಾಯಣ ತಿಳಿಸಿದ್ದಾರೆ.
ಪೊಲೀಸ್ ಕಾರ್ಯಕ್ಕೆ ಪ್ರಶಂಸೆ : ಕೊಲೆ ನಡೆದು 36 ಗಂಟೆಯೊಳಗೆ ಆರೋಪಿ ಬಂಧಿಸಿದ್ದಲ್ಲದೇ ಸವಾಲಾಗಿದ್ದ ಪ್ರಕರಣ ಭೇದಿಸಿ ಹತ್ಯೆಗೀಡಾದ ಮಹಿಳೆ ಯಾರೆಂಬುದನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯವನ್ನು ಎಸ್ಪಿ ರಾಮ ಎಲ್. ಅರಸಿದ್ದಿ ಪ್ರಶಂಸಿಸಿದ್ದಾರೆ.
ವಾಲ್ಮೀಕಿ ಸಮಾಜದ ಮಹಿಳೆಯನ್ನು ಪುಸಲಾಯಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ, ಕೊಲೆ ನಡೆದಿರುವುದು ಖಂಡನೀಯ. ಓರ್ವ ವ್ಯಕ್ತಿ ಕೊಲೆ ಮಾಡಲು ಸಾಧ್ಯವಿಲ್ಲ. ಪ್ರಕರಣದ ಹಿಂದೆ ಹಲವರ ಕೈವಾಡದ ಶಂಕೆ ಇದೆ. ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಯ ಕುಟುಂಬಸ್ಥರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕನಕಗಿರಿ ವಾಲ್ಮೀಕಿ ಮಹಾಸಭಾ ಗೌರವಾಧ್ಯಕ್ಷ ಮುದಿಯಪ್ಪ ಮಲ್ಲಿಗೆವಾಡ ತಿಳಿಸಿದ್ದಾರೆ.