ಮಸೀದಿಯಲ್ಲಿ ಮಹಿಳೆ ನಮಾಜ್‌: ಕುಟುಂಬಕ್ಕೇ ಬಹಿಷ್ಕಾರ ಆರೋಪ ನಿರಾಕರಣೆ

| Published : Feb 24 2024, 02:30 AM IST

ಸಾರಾಂಶ

ಮಹಿಳೆ ನಮಾಜ್ ಮಾಡಿದ್ದಕ್ಕೆ ಇಡೀ ಕುಟುಂಬಕ್ಕೇ ಗ್ರಾಮದಿಂದ ಬಹಿಷ್ಕಾರ ಹಾಕಿದೆ ಎಂಬ ಆರೋಪ ಕೊಡಗಿನ ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಕೇಳಿಬಂದಿದೆ. ಬಹಿಷ್ಕಾರ ಹಿನ್ನೆಲೆಯಲ್ಲಿ ಮನೆಯ ವ್ಯಕ್ತಿಯ ನಿಧನ ಬಳಿಕ ಅಂತ್ಯಸಂಸ್ಕಾರಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಈ ಮನೆಯವರು ಆರೋಪಿಸಿದ್ದು, ಮಸೀದಿ ಆಡಳಿತ ಮಂಡಳಿ ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಸುಮಾರು 25 ವರ್ಷಗಳ ಹಿಂದೆ ಮಸೀದಿಗೆ ಹೋಗಿ ಮಹಿಳೆ ನಮಾಜ್ ಮಾಡಿದ್ದಕ್ಕೆ ಇಡೀ ಕುಟುಂಬಕ್ಕೇ ಗ್ರಾಮದಿಂದ ಬಹಿಷ್ಕಾರ ಹಾಕಿದೆ ಎಂಬ ಆರೋಪ ಕೊಡಗಿನಲ್ಲಿ ಕೇಳಿಬಂದಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಇಂತಹ ಪ್ರಕರಣ ನಡೆದಿದೆ ಎಂದು ಈ ಮನೆಯವರು ಆರೋಪಿಸಿದ್ದು, ಮಸೀದಿ ಆಡಳಿತ ಮಂಡಳಿ ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಆರೋಪ ಏನು?: 30 ವರ್ಷದ ಹಿಂದೆ ಗುಂಡಿಗೆರೆಯ ಅಹಮ್ಮದ್ ಎಂಬವರನ್ನು ವಿವಾಹವಾಗಿದ್ದ ಕೇರಳದ ಕೋಝಿಕೋಡ್‌ನ ಮಹಿಳೆ ವಿವಾಹದ ಬಳಿಕ ವಿರಾಜಪೇಟೆಯಲ್ಲಿ ಮಸೀದಿಗೆ ಹೋಗಿ ನಮಾಜ್ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆಮಹಿಳೆ ಮತ್ತು ಆಕೆಯ ಪತಿಯ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿತ್ತು ಎಂಬುದು ಮಹಿಳೆಯ ಮನೆಯವರ ವಾದ.ಇತ್ತೀಚೆಗೆ ಮನೆಯ ಯಜಮಾನ ಅಹಮ್ಮದ್‌ ಮೃತಪಟ್ಟ ಸಂದರ್ಭ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೂಡಾ ಬಿಟ್ಟಿಲ್ಲ ಎಂಬುದು ಕುಟುಂಬಿಕರ ದೂರು.

ಅಹಮ್ಮದ್ ಅವರು ಇತ್ತೀಚೆಗೆ ಎದನೋವಿನಿಂದ ಮೃತಪಟ್ಟರು. ಈ ವೇಳೆ ಅವರ ಮೃತದೇಹವನ್ನು ಅವರ ಹಿರಿಯ ಹೆಂಡತಿ ಮನೆಗೆ ಕೊಂಡೊಯ್ದು, ಹಿರಿಯ ಹೆಂಡತಿ ಮಕ್ಕಳಿಂದ ಅಂತ್ಯಕ್ರಿಯೆ ಮಾಡಲಾಗಿದೆ. ಮಸೀದಿಯಲ್ಲಿ ನಮಾಜ್‌ ಮಾಡಿದ ಆರೋಪಕ್ಕೊಳಗಾದ ಕಿರಿಯ ಹೆಂಡತಿ ಹಾಗೂ ಮಕ್ಕಳಿಗೆ ಶವವನ್ನು ನೋಡಲು ಬಿಡಲಿಲ್ಲ. ಪೊಲೀಸರಿಗೆ ಹಾಗೂ ಜಿಲ್ಲಾ ವಕ್ಫ್‌ ಬೋರ್ಡಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂಬುದು ಮಹಿಳೆಯ ಪುತ್ರ ಮಾಡಿರುವ ಆರೋಪ.

-------------

ನಮ್ಮ ಜಮಾಹತ್ ಗೆ 300 ವರ್ಷ ಇತಿಹಾಸವಿದೆ. ಈ ವರೆಗೂ ಒಬ್ಬ ಮಹಿಳೆಯೂ ಮಸೀದಿಯ ಒಳಗೆ ಪ್ರಾರ್ಥನೆ ಮಾಡಿಲ್ಲ. ಈ ಮನೆಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಕುರಿತು ನಮ್ಮ ಬಳಿ ಯಾವುದೇ ಮಾಹಿತಿ ನೀಡಿಲ್ಲ. ಮೃತ ಅಹಮ್ಮದ್ ಅವರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಕುಟುಂಬದ ಆಂತರಿಕ ವಿಚಾರವನ್ನು ಇಟ್ಟುಕೊಂಡು ಜಮಾಅತ್‌ನ್ನು ಬಲಿಪಶು ಮಾಡಲಾಗುತ್ತಿದೆ.-ಇಸ್ಮಾಯಿಲ್, ಮಸೀದಿ ಆಡಳಿತ ಮಂಡಳಿತ ಸದಸ್ಯ.ಈ ಪ್ರಕರಣ ಪೊಲೀಸ್‌ ಇಲಾಖೆ ಗಮನಕ್ಕೆ ಬಂದಿದೆ. ಈ ಕುರಿತು ವಿಚಾರಿಸಿದಾಗ ಈ ಮನೆಯವರು ಹೊರಿಸಿದ ಆರೋಪದಲ್ಲಿ ಸತ್ಯಾಸತ್ಯತೆ ಕಂಡುಬಂದಿಲ್ಲ. ಯುವಕನ ತಂದೆಯ ಅಂತ್ಯಸಂಸ್ಕಾರ ಗೌರವಯುತವಾಗಿ ನಡೆದಿರುವುದು ಪರಿಶೀಲಿಸಿದಾಗ ದೃಢಪಟ್ಟಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

-ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.