ಸಾರಾಂಶ
ಕೆಟ್ಟು ನಿಂತ ಆಟೋದಲ್ಲಿ ಮಹಿಳೆ ಮೃತದೇಹ ಪತ್ತೆ ಪ್ರಕರಣ ಭೇದಿಸಿರುವ ತಿಲಕನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಗೀಗುಡ್ಡದ ಕೊಳಗೇರಿ ನಿವಾಸಿ ಸುಬ್ರಮಣಿ ಮತ್ತು ಸೆಂಥಿಲ್ ಬಂಧಿತರು.
ಬೆಂಗಳೂರು : ಕೆಟ್ಟು ನಿಂತ ಆಟೋದಲ್ಲಿ ಮಹಿಳೆ ಮೃತದೇಹ ಪತ್ತೆ ಪ್ರಕರಣ ಭೇದಿಸಿರುವ ತಿಲಕನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಗೀಗುಡ್ಡದ ಕೊಳಗೇರಿ ನಿವಾಸಿ ಸುಬ್ರಮಣಿ ಮತ್ತು ಸೆಂಥಿಲ್ ಬಂಧಿತರು.
ಆರೋಪಿಗಳು ಅ.24ರ ರಾತ್ರಿ ಸುಮಾರು 10.30ಕ್ಕೆ ಸಲ್ಮಾ (35) ಎಂಬಾಕೆಯ ಜೊತೆಗೆ ಜಗಳ ತೆಗೆದು ಸೌಟ್‌ನಿಂದ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಬೆಡ್‌ಶೀಟ್‌ಗೆ ಸುತ್ತಿ ಮನೆಯ ಸಮೀಪದ ರಸ್ತೆ ಬದಿ ಕೆಟ್ಟು ನಿಂತಿದ್ದ ಆಟೋದೊಳಗೆ ಹಾಕಿ ಪರಾರಿಯಾಗಿದ್ದರು. ಅ.25ರಂದು ಸಂಜೆ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ:
ಕೊಲೆಯಾದ ಸಲ್ಮಾಗೆ ಮದುವೆಯಾಗಿದ್ದು, ಮೂವರು ಮಕ್ಕಳು ಇದ್ದು, ಈಕೆಯ ಪತಿ ಅಕಾಲಿಕ ಮೃತಪಟ್ಟಿದ್ದಾರೆ. ಈ ನಡುವೆ ಪ್ಲಂಬರ್ ಆಗಿದ್ದ ಸುಬ್ರಮಣಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಂತೆಯೆ ಸುಬ್ರಮಣಿ ಸ್ನೇಹಿತ ಗಾರೆ ಕೆಲಸ ಮಾಡುತ್ತಿದ್ದ ಸೆಂಥಿಲ್ ಜೊತೆಗೂ ಸಲುಗೆಯಿಂದ ಇದ್ದಳು. ಇತ್ತೀಚೆಗೆ ಮತ್ತೊಬ್ಬನ ಜತೆಗೆ ಸಲುಗೆ ಬೆಳೆಸಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಸುಬ್ರಮಣಿ ಆಗಾಗ ಜಗಳ ಮಾಡುತ್ತಿದ್ದ. ಅ.24ರ ರಾತ್ರಿ ಸಲ್ಮಾ ಸುಬ್ರಮಣಿ ಮನೆಗೆ ಬಂದಿದ್ದಳು. ಈ ವೇಳೆ ಸೆಂಥಿಲ್ ಸಹ ಅಲ್ಲೇ ಇದ್ದ. ಆಗ ಮೂವರು ಒಟ್ಟಿಗೆ ಊಟ ಮಾಡಿದ್ದು, ಸಲ್ಮಾ ಜತೆಗೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಸೌಟ್‌ನಿಂದ ಸಲ್ಮಾ ತಲೆಗೆ ಹಲ್ಲೆ ಮಾಡಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ ಆರೋಪಿಗಳು ಮೃತದೇಹವನ್ನು ಬೆಡ್‌ಶೀಟ್‌ಗೆ ಸುತ್ತಿ ಮುಂಜಾನೆ 1 ಗಂಟೆಗೆ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆ ಬದಿ ಕೆಟ್ಟು ನಿಂತಿದ್ದ ಆಟೋದೊಳಗೆ ಹಾಕಿ ಪರಾರಿಯಾಗಿದ್ದರು.
ಮುಂದುವರೆದ ಆರೋಪಿಗಳ ವಿಚಾರಣೆ
ಅ.25ರಂದು ಸಂಜೆ ದಾರಿಹೋಕರು ಆಟೋದಲ್ಲಿ ಮೃತದೇಹ ಇರುವುದನ್ನು ಕಂಡು ನೀಡಿದ ಮಾಹಿತಿ ಮೇರೆಗೆ ತಿಲಕನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಳಿಕ ಮೃತ ಮಹಿಳೆಯ ಗುರುತು ಪತ್ತೆಹಚ್ಚಿದ್ದರು. ಈ ಸಂಬಂಧ ಕೊಲೆಯಾದ ಸಲ್ಮಾಳ ತಾಯಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))