ಸಾರಾಂಶ
ಹಾವೇರಿ: ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬಳ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು ₹2.45 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕು ಹ್ಯಾರಡ ಗ್ರಾಮದ ನಿವಾಸಿ ಮಾಚಿಹಳ್ಳಿ ಭಾರತಿ ವೇಣುಗೋಪಾಲ ಎಂಬವರಿಗೆ ಸೇರಿದ ಚಿನ್ನಾಭರಣಗಳು ಕಳ್ಳರ ಪಾಲಾಗಿವೆ. ಮಹಿಳೆ ಹಾವೇರಿ ಬಸ್ ನಿಲ್ದಾಣದಲ್ಲಿ ಹಾವೇರಿಯಿಂದ ಲಕ್ಷ್ಮೇಶ್ವರದ ಕಡೆಗೆ ಹೋಗುವ ಅಂಕಣದಲ್ಲಿ ನಿಂತಾಗ ಘಟನೆ ನಡೆದಿದೆ. ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗಿದ್ದರಿಂದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆಭರಣಗಳು ಕಳ್ಳತನವಾಗಿವೆ. ₹25 ಸಾವಿರ ಕಿಮ್ಮತ್ತಿನ 5 ಗ್ರಾಂ ತೂಕದ ಉಂಗುರ, ₹1 ಲಕ್ಷ ಮೌಲ್ಯದ 20 ಗ್ರಾಂ ತೂಕದ ಬಂಗಾರದ ಕೊರಳು ಚೈನ್‌ಸರ, ₹40 ಸಾವಿರ ಕಿಮ್ಮತ್ತಿನ 8 ಗ್ರಾಂ ತೂಕದ ಕೊರಳು ಚೈನ್‌ಸರ, 10 ಗ್ರಾಂ ತೂಕದ ₹50 ಸಾವಿರ ಕಿಮ್ಮತ್ತಿನ ಮತ್ತೊಂದು ಸರ, ₹30 ಸಾವಿರ ಕಿಮ್ಮತ್ತಿನ 3 ಗ್ರಾಂ ತೂಕದ ಕಿವಿಯೋಲೆ ಸೇರಿದಂತೆ ಒಟ್ಟು 49 ಗ್ರಾಂ ತೂಕದ ₹2,45,000 ಮೌಲ್ಯದ ಬಂಗಾರ ಆಭರಣಗಳು ಕಳ್ಳತನವಾಗಿವೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟರ್‌ಮನ್ ಮೇಲೆ ಹಲ್ಲೆ: ದೂರುಶಿಗ್ಗಾಂವಿ: ಕರ್ತವ್ಯನಿರತ ವಾಟರ್‌ಮನ್ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರು ಹಲ್ಲೆ ಮಾಡಿರುವ ಘಟನೆ ತಾಲೂಕಿನ ಹುಲಗೂರ ಠಾಣಾ ವ್ಯಾಪ್ತಿಯ ಹಿರೇಬೆಂಡಿಗೇರಿಯಲ್ಲಿ ನಡೆದಿದೆ.ಇತ್ತೀಚೆಗೆ ರಕ್ತ ಸಂಬಂಧಿಯೊಬ್ಬರ ನಿಧನದ ಹಿನ್ನೆಲೆ ಶವಸಂಸ್ಕಾರಕ್ಕೆ ವಾಟರ್‌ಮನ್ ಭರಮಪ್ಪ ನಾಗಪ್ಪನವರ ಹೋಗಿದ್ದು, ಹಾಗಾಗಿ ಅಂದು ಕೆಲವು ವಾರ್ಡ್‌ಗಳಿಗೆ ನೀರು ಬಿಟ್ಟಿರಲಿಲ್ಲ. ಇದೇ ನೆಪದಲ್ಲಿ ಮಾರನೇ ದಿನ ನೀರು ಬಿಡುವ ಕರ್ತವ್ಯದಲ್ಲಿದ್ದ ಪಂಚಾಯಿತಿ ಸಿಬ್ಬಂದಿಯನ್ನು ನಾಗಪ್ಪ ಬಸಪ್ಪ ಅದೃಶ್ಯಪ್ಪನವರ ಹಾಗೂ ಚನ್ನಬಸಪ್ಪ ರಾಮಪ್ಪ ಹಡಪದ ಎಂಬ ಗ್ರಾಪಂ ಸದಸ್ಯರು ಮಾರಣಾಂತಿಕವಾಗಿ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ.ವಾಟರ್‌ಮನ್‌ನನ್ನು ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ನಂತರ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಭರಮಪ್ಪ ಇಬ್ಬರ ವಿರುದ್ಧ ಹುಲಗೂರು ಠಾಣೆಯಲ್ಲಿ ಪ್ರಕರಣ ದಾಖಲಿದ್ದು, ಪಿಎಸ್‌ಐ ಪರಶುರಾಮ ನಿರೋಳ್ಳಿ ತನಿಖೆ ಕೈಗೊಂಡಿದ್ದಾರೆ.ತಾಲೂಕು ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಪ್ಪ ಮಂಚಿನಕೊಪ್ಪ ಪ್ರತಿಕ್ರಿಯಿಸಿ, ಅಹಿತಕರ ಘಟನೆ ನಡೆಯದಂತೆ ಸಂಬಂಧಿಸಿದವರು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಪಂಚಾಯಿತಿ ಡಿ ದರ್ಜೆಯ ಸಿಬ್ಬಂದಿಯನ್ನು ಸಣ್ಣಪುಟ್ಟ ಕಾರಣಕ್ಕೆ ಈ ರೀತಿ ದಂಡಿಸುವುದು ನ್ಯಾಯಸಮ್ಮತವಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.