ಸಾರಾಂಶ
- ಗೋಪಗೊಂಡನಹಳ್ಳಿ ಕೋಳಿ ಫಾರಂನಲ್ಲಿ ಕೆಲಸ ನೇತ್ರಾವತಿ ಮೇಲೆ ಅರಣ್ಯದಲ್ಲಿ ದಾಳಿ
- ತಾಯಿ ಕರಡಿ, 2 ಮರಿಕರಡಿ ಜೊತೆ ಕಾದಾಟ, ಚರ್ಮ ಕಿತ್ತು ಬರುವಂತೆ ಕಚ್ಚಿರುವ ಕರಡಿ- - -
- ಅರಣ್ಯದಲ್ಲಿ ಯಾರೂ ನೆರವಿಗೆ ಬಾರದ ಸ್ಥಿತಿಯಲ್ಲಿದ್ದ ಜಗಳೂರಿನ ರಾಜೇನಹಳ್ಳಿಯ ಮಹಿಳೆ- ಕೈ-ಕಾಲಿನ ಮಾಂಸ ಕಿತ್ತು ಬರುವಂತೆ ಕರಡಿ ದಾಳಿ, ತಾಯಿ ಕಂಡು ಅಮ್ಮಾ ಎಂದ ನೇತ್ರಾವತಿ
- ಖಾಸಗಿ ವಾಹನದಲ್ಲಿ ನೇತ್ರಾವತಿಯನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆ ತಂದ ತಾಯಿ ಯಲ್ಲಮ್ಮ- - -
ಕನ್ನಡಪ್ರಭ ವಾರ್ತೆ ದಾವಣಗೆರೆಬಹಿರ್ದೆಸೆಗೆ ಹೋಗಿದ್ದ ಒಂಟಿ ಮಹಿಳೆ ಮೇಲೆ ಕರಡಿಯೊಂದು ದಿಢೀರ್ ದಾಳಿ ಮಾಡಿದರೂ ಆಕೆ ಎದೆಗುಂದದೇ ಕರಡಿಯೊಂದಿಗೆ ನಿರಂತರ ಹೋರಾಡಿ ಪ್ರಾಣಾಪಾಯದಿಂದ ಪಾರಾದ ಘಟನೆ ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಗಳೂರು ತಾಲೂಕಿನ ರಾಜೇನಹಳ್ಳಿ ಗ್ರಾಮದ ನೇತ್ರಾವತಿ ಕರಡಿಯೊಂದಿಗೆ ಸೆಣಸಾಡಿ ಪ್ರಾಣಾಪಾಯದಿಂದ ಪಾರಾದ ಧೀರಮಹಿಳೆ. ಗೋಪಗೊಂಡನಹಳ್ಳಿ ಬಳಿ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿರುವ ಅವರು ಪತಿ, ಮಕ್ಕಳೊಂದಿಗೆ ಫಾರಂನಲ್ಲಿಯೇ ವಾಸ ಮಾಡುತ್ತಿದ್ದಾರೆ.ಕೋಳಿ ಫಾರಂ ಸುತ್ತಲಿನ ಪ್ರದೇಶದಲ್ಲಿ ದಟ್ಟ ಅರಣ್ಯವಿದೆ. ಎಂದಿನಂತೆ ಫಾರಂ ಪಕ್ಕದ ಅರಣ್ಯ ಪ್ರದೇಶಕ್ಕೆ ಬಹಿರ್ದೆಸೆಗೆಂದು ಕಾಡು ಹಾದಿಯಲ್ಲಿ ನೇತ್ರಾವತಿ ಹೋಗಿದ್ದರು. ಈ ವೇಳೆ ಎರಡು ಮರಿಗಳಿದ್ದ ತಾಯಿ ಕರಡಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಅರಣ್ಯದಲ್ಲಿ ರಕ್ಷಣೆಗಾಗಿ ಕೂಗಾಡಿದ್ದಾರೆ. ಆದರೆ, ಅವರ ಮನವಿ ಯಾರಿಗೂ ಕೇಳಿಸಿಲ್ಲ. ಯಾರೂ ಸಹಾಯಕ್ಕೆ ಬರದಂಥ ಪರಿಸ್ಥಿತಿಯಲ್ಲಿ ಸಿಲುಕಿದ್ದರು. ಆದರೂ, ಕರಡಿ ದಾಳಿ ಮಾಡಿದರೂ ಎದೆಗುಂದದೆ ರೋಷಾವೇಷದಿಂದ ಜೋರಾಗಿ ಕೂಗಾಡಿ, ಹೋರಾಡಿ ನೇತ್ರಾವತಿ ದೊಡ್ಡ ಕರಡಿಯನ್ನು ಹಿಮ್ಮೆಟ್ಟಿಸಿದ್ದಾರೆ.
ಕೆರಳಿದ ಕರಡಿ ಜೊತೆಗೆ ಕಾದಾಡಿದ ನೇತ್ರಾವತಿ ಅಲ್ಲಿಂದ ತಪ್ಪಿಸಿಕೊಳ್ಳಲು ತಮ್ಮೆಲ್ಲಾ ಶಕ್ತಿ ಪ್ರಯೋಗಿಸಿ ಓಡಲು ಶುರುಮಾಡಿದ್ದಾರೆ. ಆಗಲೂ ಬೆಂಬಿಡದ ತಾಯಿ ಕರಡಿ ಹಾಗೂ ಎರಡೂ ಮರಿಗಳೂ ನೇತ್ರಾವತಿ ಅವರನ್ನು ಬೆನ್ನುಹತ್ತಿವೆ. ಕಣ್ಣು, ಕೈ, ಕಾಲುಗಳಿಗೆ ಗಾಯವಾಗಿವೆ. ಕೈ-ಕಾಲಿನ ಮಾಂಸ ಕಿತ್ತು ಬರುವಂತೆ ಕರಡಿ ಕಚ್ಚಿ, ಪರಚಿ ಗಾಯಗೊಳಿಸಿದೆ. ಇಷ್ಟಾದರೂ, ರಕ್ತಗಾಯದ ನೋವನ್ನೆಲ್ಲಾ ನುಂಗಿಕೊಂಡಿದ್ದಾರೆ. ದೊಡ್ಡ ಮರವೊಂದರ ಪೊದೆಯಲ್ಲಿ ರಕ್ಷಣೆ ಪಡೆದಿದ್ದಾರೆ. ಪುನಃ ಕರಡಿಗಳು ದಾಳಿ ನಡೆಸಿದಾಗ ಓಡುತ್ತಿದ್ದ ಅವರು ಗುಂಡಿಯಲ್ಲಿ ಬಿದ್ದಿದ್ದಾರೆ. ಅರಣ್ಯ ಪ್ರದೇಶದಿಂದ ರಸ್ತೆ ತಲುಪಿದ ಪರಿಣಾಮ ಅವರು ಬದುಕುಳಿದಿದ್ದಾರೆ.ಬಳಿಕ ಎಷ್ಟು ಹೊತ್ತಾದರೂ ನೇತ್ರಾವತಿ ಬರಲಿಲ್ಲವಲ್ಲ ಎಂದು ತಾಯಿ ಯಲ್ಲಮ್ಮ ಅವರು ಮಗಳನ್ನು ಹುಡುಕಿಕೊಂಡು ಬಂದಿದ್ದಾರೆ. ಈ ವೇಳೆ ಗಾಯಗೊಂಡ ಸ್ಥಿತಿಯಲ್ಲಿ ನೇತ್ರಾವತಿ ಕಣ್ಣಿಗೆ ಬಿದ್ದಿದ್ದಾರೆ. ತಕ್ಷಣವೇ ಯಲ್ಲಮ್ಮ ಮಗಳ ಸ್ಥಿತಿಗೆ ಆತಂಕಗೊಂಡು ಕೂಗಾಡುತ್ತಾ, ಸಹಾಯಕ್ಕೆ ಅಂಗಲಾಚಿದ್ದಾರೆ. ಬಳಿಕ ಖಾಸಗಿ ವಾಹನದಲ್ಲಿ ನೇತ್ರಾವತಿ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆ ತಂದು, ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
- - -(ಕೋಟ್ಸ್)
ಬಹಿರ್ದೆಸೆಗೆ ಹೋಗಿದ್ದ ವೇಳೆ 2 ಚಿಕ್ಕ ಮರಿಗಳಿದ್ದ ತಾಯಿ ಕರಡಿ ದಾಳಿ ಮಾಡಿತು. ಒಬ್ಬಂಟಿಯಾಗಿದ್ದೆ. ಅರಣ್ಯದಲ್ಲಿ ಯಾರೂ ನೆರವಿಗೆ ಬರುವ ವಾತಾವರಣ ಇರಲಿಲ್ಲ. ಕರಡಿ ಜೊತೆಗೆ ಕಾದಾಡಿ, ತಪ್ಪಿಸಿಕೊಂಡು ಬಂದಿದ್ದೇನೆ. ಮುಖಕ್ಕೆ ಪರಚುತ್ತದೆಂಬ ಅರಿವಿದ್ದುದರಿಂದ ಕೈ ಅಡ್ಡ ಹಿಡಿದೆ. ಆಗ ಕೈಗೆ ಪರಚಿದೆ. ಕರಡಿ ಜೊತೆಗೆ ಕುಸ್ತಿಯಾಡಿ ತಪ್ಪಿಸಿಕೊಂಡು ಬಂದಿದ್ದೇನೆ.- ನೇತ್ರಾವತಿ, ಗಾಯಗೊಂಡ ಮಹಿಳೆ.
ಶಾಲೆಗೆ ಮೊಮ್ಮಕ್ಕಳಿಗೆ ಬಿಡಲು ಹೋಗಿದ್ದೆ. ಮರಳಿ ಬಂದಾಗ ಚಿಕ್ಕ ಮಗುವೊಂದೇ ಇತ್ತು. ಬಹಿರ್ದೆಸೆಗೆ ಹೋಗಿದ್ದ ನೇತ್ರಾವತಿ ಎಷ್ಟೊತ್ತಾದರೂ ಬರಲಿಲ್ಲವೇಕೆ ಅರಣ್ಯದ ಕಡೆ ಹೋದಾಗ ರಕ್ತಗಾಯಗೊಂಡಿದ್ದ ನೇತ್ರ ಕಂಡು ಭಯಗೊಂಡೆ. ಆಕೆ ಮೈಯಿಂದ ರಕ್ತ ಸುರಿಯುತ್ತಿತ್ತು, ಕೈಯಲ್ಲಿ ಮಾಂಸ ಕಿತ್ತು ಬರುವಂತೆ ಕರಡಿ ಗಾಯಗೊಳಿಸಿತ್ತು. ನನ್ನ ನೋಡಿದ ತಕ್ಷಣ ಮಗಳು ಅಮ್ಮಾ ಅಂತಾ ಕಿರುಚಿಕೊಂಡಳು. ತಕ್ಷಣವೇ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದೇವೆ. ಒಂದು ವಾರ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.- ಯಲ್ಲಮ್ಮ, ತಾಯಿ
- - --16ಕೆಡಿವಿಜಿ4: ಕರಡಿಗಳ ದಾಳಿಯಿಂದ ಗಾಯಗೊಂಡ ನೇತ್ರಾವತಿ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದು.
-16ಕೆಡಿವಿಜಿ5, 6: ನೇತ್ರಾವತಿ ಮೇಲೆ ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿರುವುದು.