ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಆತ್ಮವಿಶ್ವಾಸ, ಆತ್ಮಸ್ಥೈರ್ಯ ಬೆಳೆಸಿಕೊಂಡು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಮರ್ಥ್ಯ ಸಾಧಿಸಬಹುದು ಎಂದು ಹಿರಿಯ ನ್ಯಾಯವಾದಿ ಮರಿಚೆನ್ನಮ್ಮ ಹೇಳಿದರು.ತುಮಕೂರು ಜಿಲ್ಲಾ ಮಹಿಳಾ ವಕೀಲರು ಭಾನುವಾರ ನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮರಿಚೆನ್ನಮ್ಮನವರು, ನಮ್ಮಲ್ಲಿ ಅನೇಕ ಮಹಿಳೆಯರು ಮಹಿಳಾ ಶೋಷಣೆ ವಿರುದ್ಧ ಧ್ವನಿ ಮಾಡಿ ಹೋರಾಟ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಸಾವಿತ್ರಿ ಬಾಯಿ ಬಾಪುಲೆ ಮೊದಲಾದವರು ಮಹಿಳೆಯರ ಪರ ಕ್ರಾಂತಿಕಾರಕ ಹೋರಾಟ ಮಾಡಿದರು. ಅವರು ನಮಗೆ ಪ್ರೇರಣೆಯಾಗಬೇಕು ಎಂದರು.
ಉಕ್ಕಿನ ಮಹಿಳೆ ಎಂದು ಹೆಸರಾದ ಇಂದಿರಾಗಾಂಧಿಯವರು ದೇಶದ ಪ್ರಧಾನ ಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದರು. ಮಹಿಳೆಯರು ಇಂದು ಗ್ರಾಮ ಪಂಚಾಯ್ತಿ ಸದಸ್ಯೆಯಿಂದ ರಾಷ್ಟ್ರಪತಿವರೆಗಿನ ಸ್ಥಾನಮಾನಗಳನ್ನು ನಿಭಾಯಿಸುವಷ್ಟು ಸದೃಢರಾಗಿ ಬೆಳೆಯುತ್ತಿದ್ದಾರೆ. ಅಂತಹ ಅವಕಾಶಗಳು ನಮಗೆ ಒದಗಿಬರುತ್ತಿವೆ. ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಬೆಳೆಯಬೇಕು ಎಂದರು.ಫ್ರಾನ್ಸ್, ಜರ್ಮನಿ, ರಷ್ಯಾ ಮುಂತಾದ ದೇಶಗಳಲ್ಲಿ ಮಹಿಳಾ ಕಾರ್ಮಿಕರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಶೋಷಣೆ, ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಆರಂಭವಾದ ಹೋರಾಟ ಮಹಿಳಾ ದಿನ ಆಚರಣೆಗೆ ಕಾರಣವಾಯಿತು. ಇಂದು ಪ್ರಪಂಚದ ಎಲ್ಲಾ ದೇಶಗಳೂ ಮಹಿಳಾ ದಿನ ಆಚರಿಸಿ, ಮಹಿಳೆಯರ ರಕ್ಷಣೆ, ಹಕ್ಕು ಕಾಪಾಡುವ ಪ್ರಯತ್ನ ಮಾಡುತ್ತಿವೆ. ಇದರ ನಡುವೆ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾಳೆ ಎಂದರು.
ಮುಂದೆ ರಾಜಕಾರಣದಲ್ಲೂ ಮಹಿಳಾ ಮೀಸಲಾತಿ ಅನುಷ್ಟಾನಗೊಂಡಾಗ ಶೇಕಡ 33 ರಷ್ಟು ಮಹಿಳೆಯರು ಅಸೆಂಬ್ಲಿ, ಪಾರ್ಲಿಮೆಂಟಿನಲ್ಲೂ ಪ್ರಾತಿನಿಧ್ಯ ಸ್ಥಾಪಿಸಲು ಅವಕಾಶವಿದೆ ಎಂದು ಹೇಳಿದರು.ಹಿಂದೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಎರಡನೇ ದರ್ಜೆ ಪ್ರಜೆಯಾಗಿದ್ದಳು. ಆಕೆಗೆ ಯಾವುದೇ ಪ್ರಮುಖ ಸ್ಥಾನಮಾನ, ಧ್ವನಿ ಇರಲಿಲ್ಲ. ಆಚರಣೆಯಲ್ಲಿದ್ದ ಅನಿಷ್ಟ ಪದ್ದತಿಗಳಿಂದ ಮಹಿಳೆ ಯಾತನೆ ಅನುಭವಿಸುತ್ತಿದ್ದಳು. ಇಂತಹ ಮಹಿಳೆಯರು ಶೋಷಣೆ ಮುಕ್ತರಾಗಲು ಡಾ.ಅಂಬೇಡ್ಕರ್ ಅವರು ಕಾರಣ. ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ರಕ್ಷಣೆ, ಸ್ಥಾನಮಾನ ದೊರಕಲು ಅಂಬೇಡ್ಕರ್ ಸಂವಿಧಾನದಿಂದ ಸಾಧ್ಯವಾಗಿದೆ ಎಂದರು.
ಈಗ ಮಹಿಳೆಯರು ತಮ್ಮ ಶಕ್ತಿ ಸಾಮರ್ಥ್ಯ ಬಳಿಸಿಕೊಂಡು ಸಾಧನೆ ಮಾಡಿ ಆದರ್ಶ ಸಂಸಾರ, ಸಮಾಜ ಕಟ್ಟಲು ಮುಂದಾಗಬೇಕು ಎಂದು ಮರಿಚೆನ್ನಮ್ಮ ಮನವಿ ಮಾಡಿದರು.ವಕೀಲರಾದ ಮಂಜುಳಾ, ವಿಜಯ, ಪೂರ್ಣಿಮಾ, ಅನಿತಾ, ನೇತ್ರಾವತಿ, ಭವ್ಯ ಶಾನುಭೋಗ್, ಬೇಬಿ, ದೀಪಾ, ಮಂಜುಳಾ, ಪ್ರಿಯದರ್ಶಿನಿ, ಸುಧಾ, ಮೋಹನ್‌ಕುಮಾರ್, ಸೇವಾಪ್ರಿಯಾ, ಜಯಂತಿ ಮತ್ತಿತರರು ಭಾಗವಹಿಸಿದ್ದರು.