ಮಹಿಳೆಗೂ ಸಮಾನ ಒಡೆತನ ಅವಶ್ಯಕ: ಡಾ.ವೈ.ಲಕ್ಷ್ಮೀದೇವಿ

| Published : Mar 31 2024, 02:05 AM IST

ಸಾರಾಂಶ

ದೇಶದ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಶೇ.೪೮ ಇದ್ದರೂ ಭೂ ಒಡೆತನ ಹೊಂದಿರುವುದು ಕೇವಲ ಶೇ.೧೩ ರಷ್ಟು ಮಾತ್ರ. ಮಹಿಳೆ ಕಾರ್ಯವನ್ನು ಪರಿಗಣಿಸದೇ ನಕಾರಾತ್ಮಕವಾಗಿ ಬಿಂಬಿಸುವ ಕಾರ್ಯ.

ಹೊಸಪೇಟೆ: ದೇಶದ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಶೇ.೪೮ ಇದ್ದರೂ ಭೂ ಒಡೆತನ ಹೊಂದಿರುವುದು ಕೇವಲ ಶೇ.೧೩ ರಷ್ಟು ಮಾತ್ರ. ಮಹಿಳೆ ಕಾರ್ಯವನ್ನು ಪರಿಗಣಿಸದೇ ನಕಾರಾತ್ಮಕವಾಗಿ ಬಿಂಬಿಸುವ ಕಾರ್ಯ ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರಾಧ್ಯಾಪಕಿ ಡಾ.ವೈ.ಲಕ್ಷ್ಮೀದೇವಿ ಹೇಳಿದರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕನ್ನಡ ವಿವಿಯ ಮಹಿಳಾ ಅಧ್ಯಯನ ವಿಭಾಗ ಮತ್ತು ಅಲ್ಲಂ ಸುಮಂಗಲಮ್ಮ ದತ್ತಿ ನಿಧಿ ಹಾಗೂ ಯುಜಿಸಿ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶನಿವಾರ ಡಾ.ರಾಜಕುಮಾರ ಸಭಾಂಗಣದಲ್ಲಿ ಸಮಕಾಲೀನ ಮಹಿಳಾ ಸಮಸ್ಯೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ವಲಯದಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ವೇತನ ದೊರೆತರೂ ಅತಿಹೆಚ್ಚು ಮಹಿಳೆಯರು ಭಾಗವಹಿಸುವ ಖಾಸಗಿ ಕ್ಷೇತ್ರದಲ್ಲಿ ವೇತನದ ಅಸಮಾನತೆಯನ್ನು ಕಾಣಬಹುದು. ಮಹಿಳೆಯು ಸ್ವಾವಲಂಬಿಯಾಗಲು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಮಹಿಳೆಯರಿಗೆ ಪರಿಪೂರ್ಣ ಕೌಶಲ್ಯದ ಅಗತ್ಯವಿದೆ. ಮಹಿಳೆ ಕೆಲಸ ಮಾಡುವ ಸ್ಥಳದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗುತ್ತಿದ್ದಾಳೆ. ಬಾಲ್ಯವಿವಾಹ, ಒತ್ತಾಯದ ಮದುವೆ, ಭ್ರೂಣ ಹತ್ಯೆ, ವಿವಾಹ ವಿಚ್ಛೇದನ, ಒತ್ತಾಯದ ಗರ್ಭಪಾತದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಆತಂಕಕಾರಿಯಾದ ವಿಷಯ. ಮಹಿಳೆಗೆ ತನ್ನ ದೇಹ ತನ್ನ ಹಕ್ಕು ಎಂಬುದು ಮೂಲಭೂತವಾದ ಹಕ್ಕಾಗಬೇಕು. ಮಹಿಳೆಯರು ಹೆಚ್ಚು ಶಿಕ್ಷಿತರಾದಾಗ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಾಗುತ್ತದೆ ಎಂದರು.

ಕನ್ನಡ ವಿವಿಯ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರ ಸಮಸ್ಯೆಗಳು ಇಂದಿಗೂ ಪರಿಹಾರವಾಗದೇ ನಮ್ಮೆದುರು ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿವೆ. ಮಹಿಳಾ ಕಿರುಕುಳ ಎಂದರೆ ಕೇವಲ ಲೈಂಗಿಕ ಕಿರುಕುಳ ಎಂಬುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೆ ಅದರಾಚೆಗೂ ಶಿಕ್ಷಣ, ವೇತನ, ಮುಖ್ಯವಾಹಿನಿಯಲ್ಲಿ ಭಾಗವಹಿಸುವಿಕೆಯಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಮಹಿಳಾ ಅಧ್ಯಯನ ವಿಭಾಗ ಮುಖ್ಯಸ್ಥೆ ಡಾ.ಶೈಲಜ ಇಂ.ಹಿರೇಮಠ, ಸಂಶೋಧನಾರ್ಥಿಗಳಾದ ಶ್ಯಾಮಣ್ಣ, ರಾಹುಲ್ ಇದ್ದರು.