ಸಾರಾಂಶ
ಯಲ್ಲಾಪುರ: ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳು ತಮ್ಮ ಜವಾಬ್ಧಾರಿಯನ್ನು ಪ್ರಾಮಾಣಿಕವಾಗಿ, ಬದ್ಧತೆಯಿಂದ ನಿರ್ವಹಿಸುವುದು ಅಗತ್ಯ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ತಿಳಿಸಿದರು.ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಯಲ್ಲಾಪುರ ಮಂಡಲದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ನಾರಿ ಶಕ್ತಿ ವಂದನ್ ಅಧಿನಿಯಮ ೨೦೨೩ ಮೂಲಕ ಮಹಿಳಾ ಸಬಲೀಕರಣದ ನಿಜ ಆಶಯದೊಂದಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಕಲ್ಪಿಸಿದ್ದು ಐತಿಹಾಸಿಕ ನಿರ್ಧಾರ ಎಂದರು.
ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಿದ್ದಾರೆ. ಅಲ್ಲದೇ ಪ್ರಧಾನಿಯಾಗಬೇಕೆಂಬ ಕನಸಿನಲ್ಲಿರುವ ರಾಹುಲ್ ಗಾಂಧಿಯವರನ್ನು ಸೋಲಿಸಿದ ಸ್ಮೃತಿ ಇರಾನಿ ಇಂದು ಕೇಂದ್ರದಲ್ಲಿ ಸಚಿವರಾಗಿದ್ದು, ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿದ್ದಾರೆ ಎಂದರು.ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆಯೊಂದಿಗೆ ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸವಾಲುಗಳಿದ್ದರೂ ಅವುಗಳನ್ನೆದುರಿಸಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆಂದರು.
ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ನಮ್ಮ ತಾಯಿ ಭಾರತ ಮಾತೆಯನ್ನು ಶಕ್ತಿ ಸ್ವರೂಪಿಣಿಯಾಗಿ ಆರಾಧಿಸುತ್ತೇವೆ. ನಮಗೆ ಸಂಸ್ಕಾರ ನೀಡುವ ತಾಯಂದಿರನ್ನು ಬಿಜೆಪಿ ಸ್ತ್ರೀಯರನ್ನು ಗೌರವಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮೋರ್ಚಾ ಮಂಡಲಾಧ್ಯಕ್ಷೆ ಶೃತಿ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್, ರವಿ ಕೈಟಕರ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಿರ್ಮಲಾ ನಾಯ್ಕ, ಸುನಂದಾ ಮರಾಠಿ ಮತ್ತಿತರರು ಉಪಸ್ಥಿತರಿದ್ದರು.