ಲೋಕ ಉದ್ಧಾರಕ್ಕಾಗಿಯೇ ಸ್ತ್ರೀ ಜನನ: ಓಂಕಾರೇಶ್ವರ ಶ್ರೀ

| Published : Mar 31 2024, 02:04 AM IST

ಸಾರಾಂಶ

ಮಹಿಳೆ ಮನೆಗೆ ಮೂಲಾಧಾರವಾಗಿದ್ದು, ಶಿಲ್ಪಿಯಾಗಿ, ಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ ಎಂದು ಆವರಗೊಳ್ಳ ಹಿರೇಮಠದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಲೇಬೆನ್ನೂರಲ್ಲಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮಹಿಳೆ ಮನೆಗೆ ಮೂಲಾಧಾರವಾಗಿದ್ದು, ಶಿಲ್ಪಿಯಾಗಿ, ಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ ಎಂದು ಆವರಗೊಳ್ಳ ಹಿರೇಮಠದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಕಡರನಾಯ್ಕನಹಳ್ಳಿಯಲ್ಲಿ ಆಯೋಜಿಸಿದ್ದ ಬಾಗಿನ ಅರ್ಪಣೆ, ವಿವಿಧ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಲೋಕದ ಉಪಕಾರಕ್ಕಾಗಿ ಸ್ತ್ರೀ ಜನನವಾಗಿದೆ. ಅವಳು ಒಲಿದರೆ ಬಡವನೂ ಬಲ್ಲಿದನಾಗುತ್ತಾನೆ ಎಂದರು.

ಮಹಾತಪಸ್ವಿ ಸೇವಾ ಪ್ರತಿಷ್ಟಾನವು ಮಹಿಳೆಯರಿಗೆ ಆತ್ಮಬಲ, ಮನೋಬಲ, ಧೈರ್ಯ ನೀಡಲು ಸಂಕಲ್ಪ ಮಾಡಿದೆ. ರಾಷ್ಟ್ರವು ಮಹಿಳೆಯರ ಮೇಲೆ ಅವಲಂಬನೆಯಾಗಿದೆ. ದೇಶಕ್ಕೇ ಅನ್ನ ನೀಡುವ ರೈತರ ಮಕ್ಕಳಿಗೆ ಕನ್ಯೆ ದೊರಕದಿರುವುದು ವಿಷಾದನೀಯ ಎಂದ ಶ್ರೀಗಳು, ಜನರಲ್ಲಿ ಸ್ವಾರ್ಥಪರ ಚಿಂತನೆಗಳ ಬದಲು, ಸಮಷ್ಠಿಪ್ರಜ್ಞೆ ಮೂಡಬೇಕಿದೆ ಎಂದರು.

ಪ್ರತಿಷ್ಠಾನ ಸಂಸ್ಥಾಪಕ ಕವಿ ಗುರುರಾಜ್ ಗುರೂಜಿ ಮಾತನಾಡಿ, ಮಹಾತಪಸ್ವಿ ಸೇವಾ ಪ್ರತಿಷ್ಟಾನ ಆರಂಭವಾಗಿ 8 ವರ್ಷಗಳಾಗಿವೆ. ರಾಜ್ಯ ಮತ್ತು ತಮಿಳುನಾಡಲ್ಲಿ ಒಟ್ಟು ೨೭ ಉಪ ಶಾಖೆಗಳನ್ನು ತೆರೆಯಲಾಗಿದೆ. ಒಂದೂವರೆ ತಿಂಗಳಿಂದ ವಿವಿಧ ಭಾಗದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಬಳೆ, ಕುಂಕುಮ, ಅರಿಶಿನ ಜನ್ಮಸಿದ್ದ ಹಕ್ಕು. ಯಾವ ಶಾಸ್ತ್ರ ಮತ್ತು ವೇದದಲ್ಲಿಯೂ ಪತಿ ಮರಣಾನಂತರ ಅವುಗಳನ್ನು ತೆಗೆಯಬೇಕು ಎಂದು ತಿಳಿಸಿಲ್ಲ. ಸ್ತ್ರೀ ನಿತ್ಯ ಸುಮಂಗಲೀ ಎಂದು ಅಭಿಪ್ರಾಯಪಟ್ಟರು.

ಬಡ ಮಹಿಳೆಯರಿಗೆ ಮಾಸಿಕ ಆಹಾರ ಸಾಮಗ್ರಿ, ಗರ್ಭಿಣಿಯರಿಗೆ ಬಯಕೆಯ ಬುತ್ತಿ ಹಾಗೂ ಗಡಿ ಕಾಯುವ ಗರ್ಭಗುಡಿಗೆ ನಮನ ಎಂಬ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು. ಉತ್ತಮ ಸ್ಪಂದನೆ ದೊರಕಿದೆ ಎಂದರು.

ಪ್ರತಿಷ್ಠಾನ ರಾಜ್ಯಾಧ್ಯಕ್ಷೆ ಶಾಂತಕುಮಾರಿ ಅವರು ಸಂಸ್ಥೆಯು ನಡೆದ ದಾರಿಯನ್ನು ವಿವರಿಸಿದರು. ಉಪನ್ಯಾಸಕಿ ಶಿಲ್ಪಕಲಾ ಉಪನ್ಯಾಸ ನೀಡಿದರು. ಮುಖಂಡರಾದ ಕೆ.ಎಚ್.ನಾಗನಗೌಡ, ಜಿ,ಮಂಜುನಾಥ್, ಕೊಟ್ರೇಶಪ್ಪ, ವೀರೇಶ್, ಷಣ್ಮುಖಪ್ಪ, ನೀಲಮ್ಮ, ಶೋಭಾ, ಹನುಮಕ್ಕ, ಅಂಬುಜಾ, ಗೀತಮ್ಮ, ಶಕುಂತಲಾ, ಜನನಿ ಸಂಘಟನೆಯ ಸುನೀತಾ, ಗೀತಮ್ಮ, ಸಹನಾ, ಸವಿತಾ, ನಾಗರತ್ನ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧಕ ಮಹಿಳೆಯರಾದ ಸುರೇಖಾ ರಾಯ್ಕರ್, ನಾಗಮ್ಮ, ಕಲಾವಿದೆ ರಂಗಮ್ಮ, ಶಶಿಕಲಾ, ಅನಸೂಯ ಅವರನ್ನು ಗೌರವಿಸಲಾಯಿತು.

- - - -ಚಿತ್ರ-೧:

ಕಡರನಾಯ್ಕನಹಳ್ಳಿಯಲ್ಲಿ ವಿವಿಧ ಸಾಧಕ ಮಹಿಳೆಯರನ್ನು ಶ್ರೀಗಳು ಗೌರವಿಸಿದರು.