ಕೌಶಲದಲ್ಲಿ ಪುರುಷರಿಗೆ ಮಹಿಳೆಯೂ ಸಮ

| Published : Jan 20 2025, 01:30 AM IST

ಕೌಶಲದಲ್ಲಿ ಪುರುಷರಿಗೆ ಮಹಿಳೆಯೂ ಸಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪುರುಷರಿಗೆ ಸರಿಸಮಾನವಾಗಿ ಮಹಿಳೆಯು ಸಹ ಕೌಶಲ ಕಲಿಯುವುದರಲ್ಲಿ ಸಮನಾಗಿರುವಳು ಎಂಬ ಉದ್ದೇಶದಿಂದ ಮಹಿಳೆಯರಿಗೆ ನಲ್-ಜಲ್ ಮಿತ್ರ ತರಬೇತಿ ನೀಡಲಾಗುತ್ತಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪುರುಷರಿಗೆ ಸರಿಸಮಾನವಾಗಿ ಮಹಿಳೆಯು ಸಹ ಕೌಶಲ ಕಲಿಯುವುದರಲ್ಲಿ ಸಮನಾಗಿರುವಳು ಎಂಬ ಉದ್ದೇಶದಿಂದ ಮಹಿಳೆಯರಿಗೆ ನಲ್-ಜಲ್ ಮಿತ್ರ ತರಬೇತಿ ನೀಡಲಾಗುತ್ತಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ನಡೆದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಎನ್‌ಆರ್‌ಎಲ್‌ಎಂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಜಲ ಜೀವನ್ ಮಿಷನ್ ಅಡಿ ನಲ್ ಜಲ್ ಮಿತ್ರ ೧೭ ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯು ಸಶಕ್ತಳಾಗಬೇಕೆಂಬುವುದು ನಲ್-ಜಲ್ ಮಿತ್ರ ತರಬೇತಿಯ ಉದ್ದೇಶ. ಪೈಪ್‌ಗಳ ದುರಸ್ಥಿ, ಕೊಳಾಯಿ ಜೋಡಣೆ ಹಾಗೂ ವಿದ್ಯುತ್ ಪರಿಕರಗಳ ದುರಸ್ಥಿಗಳ ಕುರಿತು ಚನ್ನಾಗಿ ತಿಳಿದುಕೊಂಡು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನೀರಿನ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರು ಕೇವಲ ಬ್ಯೂಟಿಪಾರ್ಲರ್ ಹಾಗೂ ಟೇಲರಿಂಗ್ ತರಬೇತಿಗಷ್ಟೇ ಸಿಮೀತವಾಗಿರದೇ ಸರ್ಕಾರ ಮಹಿಳೆಯರಿಗಾಗಿ ಹಲವಾರಿ ಕೌಶಲ ತರಬೇತಿ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿವೆ. ಅವುಗಳಲ್ಲಿಯೂ ಆಸಕ್ತಿ ವಹಿಸಿ ಕೌಶಲ ಪಡೆದು ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಬಹುದು ಸಲಹೆ ನೀಡಿದರು.

ಈ ತರಬೇತಿಯು ಪ್ರತಿ ಗ್ರಾಮ ಪಂಚಾಯಿತಿಯಿಂದ ಸ್ವಸಹಾಯ ಸಂಘದ ಇಬ್ಬರು ಮಹಿಳಾ ಸದಸ್ಯರಿಗೆ ತರಬೇತಿಗಾಗಿ ಗುರುತಿಸಲಾಗಿದೆ. ತರಬೇತಿ ನಂತರ ಪ್ರತಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ, ಟೂಲ್ ಕಿಟ್ ಹಾಗೂ ಎರಡು ಜೊತೆ ಸಮವಸ್ತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ, ತಮ್ಮ ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಕೌಶಲ್ಯ ಹೊಂದಿರುವ ಮಹಿಳೆ ಈ ತರಬೇತಿಯಿಂದ ತಾಂತ್ರಿಕ ಕೌಶಲವನ್ನು ಪಡೆದು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಿ, ಗ್ರಾಮ ಸಮಸ್ಯೆಗಳನ್ನು ಒಂದೊಂದಾಗಿ ಸುಧಾರಣೆಗೆ ತರಬಹುದು ಎಂದು ಹೇಳಿದರು.

ತರಬೇತಿಯು ಸೋಲಾಪುರ ರಸ್ತೆಯಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ೧೭ ದಿನಗಳ ಕಾಲ ತರಬೇತಿ ಹಾಗೂ ೨೧ ದಿನಗಳ ಕ್ಷೇತ್ರ ಭೇಟಿ ಹೀಗೆ ಒಟ್ಟು ೩೮ ದಿನಗಳ ತರಬೇತಿಯಿದೆ. ತಾವು ಉತ್ತಮ ರೀತಿಯಲ್ಲಿ ತರಬೇತಿ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ.ಕುಂಬಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರಮೇಶ ದೇಸಾಯಿ, ನಿರ್ಮಿತಿ ಕೇಂದ್ರದ ಅಧಿಕಾರಿ ಜಿ.ಎನ್.ಮಲಜಿ ಮುಂತಾದವರು ಇದ್ದರು.