ಸಾರಾಂಶ
ಬಳ್ಳಾರಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳಾ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ಕೆಲಸ ಮಾಡುತ್ತಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು. ನಗರದ ಬಸವಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜರುಗಿದ ಮಹಿಳಾ ಮಾತೃ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ದೇಶವನ್ನು ಹೆಚ್ಚು ಕಾಲ ಆಳಿರುವ ಕಾಂಗ್ರೆಸ್‌ನಿಂದ ಈವರೆಗೆ ಮಹಿಳಾಪರವಾದ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದರು.ಚುನಾವಣೆ ಎಂಬ ಕುರುಕ್ಷೇತ್ರ ಯುದ್ಧದಲ್ಲಿ ನಾನಿದ್ದೇನೆ. ದೊಡ್ಡ ಶಕ್ತಿಯಾಗಿರುವ ಮಹಿಳೆಯರು ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ಶ್ರಮಿಸಬೇಕು. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಅತಿಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಮೂರು ದಶಕಗಳ ರಾಜಕೀಯದಲ್ಲಿ ಜನಸೇವೆಯಲ್ಲಿ ಹೆಚ್ಚು ನಿರತನಾಗಿದ್ದೇನೆ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದೇನೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಮಹಿಳೆಯರು ಹೆಚ್ಚು ಪ್ರಜ್ಞಾವಂತರಿದ್ದಾರೆ. ಯಾವ ಪಕ್ಷವನ್ನು ಗೆಲ್ಲಿಸಿದರೆ ರಾಷ್ಟ್ರಕ್ಕೆ ಒಳಿತಾಗುತ್ತದೆ ಎಂಬುದು ಅವರಿಗೆ ಗೊತ್ತಿದೆ. ಆದರೆ, ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಕೆಲಸವನ್ನು ಪಕ್ಷದ ಮಹಿಳಾ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.ಪಕ್ಷದ ಮಹಿಳಾ ಮುಖಂಡರಾದ ಲಕ್ಷ್ಮಿ ಅರುಣಾ ಮಾತನಾಡಿ, ಇಡೀ ದೇಶದಲ್ಲಿ ಬಿಜೆಪಿ ಪರ ಅಲೆಯಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎಂಬುದು ದೇಶದ ಮತದಾರರ ಸಂಕಲ್ಪವಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಮಹಿಳೆಯರ ಮೇಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಮನೆಮನೆಗೆ ತೆರಳಿ, ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಮುಂದುವರಿಯುವುದರಿಂದ ಭಾರತದ ಸಮಗ್ರ ಅಭಿವೃದ್ಧಿ ನೆಲೆಯಲ್ಲಾಗುವ ಬೆಳವಣಿಗೆ ಕುರಿತು ವಿವರಿಸಿ, ಮನವರಿಕೆ ಮಾಡಬೇಕು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಭಾರತಿಶೆಟ್ಟಿ, ಹೇಮಲತಾ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಸಹ ಸಂಚಾಲಕಿ ಭವ್ಯಾ ಅಂಬರೇಷ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಗುಣ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಸೇರಿದಂತೆ ಪಕ್ಷದ ಮುಖಂಡರು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.