ಮಹಿಳೆಯರು ತಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಹಾಗೂ ಆದಾಯದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಉಳಿತಾಯದ ಮನೋಭಾವ ಬೆಳೆಸಿಕೊಂಡು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾಮಾಜಿಕ ಜಾಲತಾಣಗಳ ಬಳಕೆ ವೇಳೆ ಮಹಿಳೆಯರು ಎಚ್ಚರ ವಹಿಸುವುದು ಅಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಮೈಸೂರಿನ ಸಾಹಿತ್ಯ ಸಂಭ್ರಮ ಕನ್ನಡ ಓದುಗರ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಕಿವಿಮಾತು ಹೇಳಿದರು.

ಸಮೀಪದ ಎಲೆಕೆರೆ ಅಕ್ಷಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ತಾಲೂಕು ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಂಗವಾಗಿ ಮಹಿಳಾ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಹಿಳೆಯರು ಮತ್ತು ಮಕ್ಕಳು ಎದುರಿಸಬಹುದಾದ ಸವಾಲುಗಳು ಹಾಗೂ ಸೈಬರ್ ಅಪರಾಧಗಳ ಕುರಿತು ಉಪನ್ಯಾಸ ನೀಡಿದರು.

ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಬಳಸುವುದು, ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಮತ್ತು ಆನ್ ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ಮೈಸೂರು ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಬಿ.ಆರ್.ಜಯಕುಮಾರಿ ಕುಟುಂಬ ನಿರ್ವಹಣೆಯೊಂದಿಗೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಅಗತ್ಯದ ಕುರಿತು ಮಾತನಾಡಿದರು.

ಮಹಿಳೆಯರು ತಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಹಾಗೂ ಆದಾಯದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಉಳಿತಾಯದ ಮನೋಭಾವ ಬೆಳೆಸಿಕೊಂಡು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ.ಯೋಗೀಶ್ ಮಾತನಾಡಿ, ಶ್ರೀ ಕ್ಷೇತ್ರ ಯೋಜನೆಯ ವಿವಿಧ ಜನಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಮಹಿಳೆಯರ ಸಬಲೀಕರಣ, ಸಾಮಾಜಿಕ ಜಾಲತಾಣಗಳಿಂದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹಾಗೂ ಕುಟುಂಬ ನಿರ್ವಹಣೆಯೊಂದಿಗೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮೀನಾಕ್ಷಿ ಪಿ.ಚೆಲುವರಾಜು ಅಧ್ಯಕ್ಷತೆ ವಹಿಸಿದ್ದರು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ತಯಾರಿಕೆ ಹಾಗೂ ಪೌಷ್ಟಿಕ ಆಹಾರ ಕರಕುಶಲ ಪ್ರದರ್ಶನ ಸ್ವ-ಉದ್ಯೋಗ ಮಾರಾಟ ಮಳಿಗೆ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆದವು. ಈ ವೇಳೆ ಶ್ರೀ ಕ್ಷೇತ್ರದ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ಸಿ.ಧನಂಜಯ್, ಜಿಲ್ಲಾ ಸದಸ್ಯೆ ಶಾಂತಲಾ ರಾಮಕೃಷ್ಣೇಗೌಡ, ಪ್ರಾದೇಶಿಕ ವಿಭಾಗ ಜ್ಞಾನವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ಮೂಕಾಂಬಿಕಾ, ತಾಲೂಕು ಸಮನ್ವಯಾಧಿಕಾರಿ ತೇಜಸ್ವಿ, ತಾಲೂಕು ಯೋಜನಾಧಿಕಾರಿ ಯಶವಂತ್, ವೇದಿಕೆ ಸದಸ್ಯರಾದ ಎಚ್.ಆರ್.ಧನ್ಯಕುಮಾರ್, ಸಿ.ಡಿ.ಮಹಾದೇವ್, ಬಿ.ಜಿ.ಪ್ರಭಾಕರ್ ಹಾಜರಿದ್ದರು.