ಸಂಘರ್ಷವಿಲ್ಲದೇ ಮಹಿಳೆ ಏನೂ ಸಾಧಿಸಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

| Published : Jan 24 2024, 02:04 AM IST

ಸಂಘರ್ಷವಿಲ್ಲದೇ ಮಹಿಳೆ ಏನೂ ಸಾಧಿಸಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಮಹಿಳೆ ಇಂದು ಸಾಕಷ್ಟು ಸ್ವಾವಲಂಬಿಯಾಗಿದ್ದಾಳೆ. ಮಹಿಳೆಯರು ಮುಂದೆ ಬರಬೇಕು, ಮುಖ್ಯ ವಾಹಿನಿಗೆ ಬರಬೇಕೆಂದು ಹೇಳುತ್ತಾರೆ. ಆರೆ, ಸಾಕಷ್ಟು ಶ್ರಮವಹಿಸಿ, ಮುಂದೆ ಬಂದರೂ ಹಿಂದೆ ತಳ್ಳುತ್ತಾರೆ. ಹಾಗಾಗಿ ಮಹಿಳೆಯರು ಆತ್ಮವಿಶ್ವಾಸದಿಂದ ಸರಿ ಸಮಾನವಾಗಿ ಸಾಧನೆ ಮಾಡಿ, ಸರಿ ಸಮಾನವಾಗಿ ನಿಲ್ಲುವ ಸಾಮರ್ಥ್ಯ ಪ್ರದರ್ಶಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದರೂ, ಸಂಘರ್ಷವಿಲ್ಲದೇ ಸುಲಭವಾಗಿ ಆಕೆ ಏನನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಷಾದಿಸಿದರು.

ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪಲ್ಲಿ ಮಂಗಳವಾರ ಆತ್ಮಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸತ್ವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಮಹಿಳೆ ಇಂದು ಸಾಕಷ್ಟು ಸ್ವಾವಲಂಬಿಯಾಗಿದ್ದಾಳೆ. ಮಹಿಳೆಯರು ಮುಂದೆ ಬರಬೇಕು, ಮುಖ್ಯ ವಾಹಿನಿಗೆ ಬರಬೇಕೆಂದು ಹೇಳುತ್ತಾರೆ. ಆರೆ, ಸಾಕಷ್ಟು ಶ್ರಮವಹಿಸಿ, ಮುಂದೆ ಬಂದರೂ ಹಿಂದೆ ತಳ್ಳುತ್ತಾರೆ. ಹಾಗಾಗಿ ಮಹಿಳೆಯರು ಆತ್ಮವಿಶ್ವಾಸದಿಂದ ಸರಿ ಸಮಾನವಾಗಿ ಸಾಧನೆ ಮಾಡಿ, ಸರಿ ಸಮಾನವಾಗಿ ನಿಲ್ಲುವ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಜಗತ್ತು ತಾಂತ್ರಿಕತೆಯಲ್ಲಿ ಸಾಕಷ್ಟು ಮುಂದಿದೆ. ಆದರೆ, ಮನುಷ್ಯತ್ವವನ್ನು ರೂಪಿಸಲು ತಾಂತ್ರಿಕತೆಯಿಂದ ಸಾಧ್ಯವಾಗದು. ಮನುಷ್ಯತ್ವದಿಂದ ಮನುಷ್ಯರಿಗಾಗಿ ಸೇವೆ ಮಾಡುವ ಇಲಾಖೆಯೆಂದರೆ ಅದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಇಲ್ಲಿ ಮಗು ಗರ್ಭಾವಸ್ಥೆಯಿಂದ ಜನನವಾಗಿ ಬೆಳೆದು,ಮರಣ ಹೊಂದುವವರೆಗೂ ಇಲಾಖೆ ಸೇವೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಕ್ರಮದ ಜವಾಬ್ಧಾರಿಯೂ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಸರ್ಕಾರದ ಐದೂ ಗ್ಯಾರಂಟಿಗಳಿಂದ ಮಹಿಳೆಯರು ಇಂದು ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತಿದೆ. ಏಕೆಂದರೆ ಮನೆಯ ಖರ್ಚುವೆಚ್ಚಗಳು ಕಡಿಮೆಯಾಗಿದ್ದು, ಮನೆ ನಿರ್ವಹಣೆಯೂ ಸುಲಭವಾಗಿದೆ. ಗೃಹಲಕ್ಷ್ಮಿ ಯೋಜನೆ ಮೂಲಕ ಯಜಮಾನಿಗೆ ವರ್ಷಕ್ಕೆ 24 ಸಾವಿರ ರು. ಜೊತೆಗೆ ಉಚಿತ ಸಾರಿಗೆ ವ್ಯವಸ್ಥೆ, ಉಚಿತ ವಿದ್ಯುತ್‌, ಅನ್ನ ಭಾಗ್ಯ, ಪದವಿ, ಡಿಪ್ಲೋಮಾ ಮಕ್ಕಳಿದ್ದರೆ ಯುವ ನಿಧಿ ಸೌಲಭ್ಯ ಸಿಗಲಿದೆ. ಆರ್ಥಿಕವಾಗಿ ಮುಂದೆ ಬರಲು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.

ಎಸ್ಸೆಸ್ ಕೇರ್ ಟ್ರಸ್ಟ್ ನ ಅಜೀವ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕಿ ವಾಸಂತಿ ಉಪ್ಪಾರ, ವಿಕಲಚೇತನರ ಅಧಿಕಾರಿ ಕೆ.ಕೆ.ಪ್ರಕಾಶ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಕಲಚೇತನ ಘನಶ್ಯಾಮ ಟಿ.ಬಾಂಡಗೆ, ಬಿಎಸ್‌ಸಿ ಸಂಸ್ಥೆಯ ಬಿ.ಸಿ.ಚಂದ್ರಶೇಖರ, ಆತ್ಮಿ ಅಧ್ಯಕ್ಷ ಬಿ.ಪ್ರಸನ್ನ, ಕಾರ್ಯದರ್ಶಿ ಶೋಭ ಶಿವರಾಜ ಇತರರಿದ್ದರು.

ಮಹಿಳೆಯರ ಸಂಕಷ್ಟಗಳನ್ನು ಅರಿತಿದ್ದ ಬಸವಣ್ಣನವರು ಅನುಭವ ಮಂಟಪದಲ್ಲಿ ಪುರುಷರಿಗೆ ಸರಿಸಮಾನವಾದ ಸ್ಥಾನಮಾನ ಹಾಗೂ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಸಮಾನ ಅವಕಾಶ, ಹಕ್ಕುಗಳಿದ್ದು, ಮಹಿಳೆಯರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿದವರಿಗೆ ನ್ಯಾಯಾಲಯಗಲು ಇನ್ನೂ ಹೆಚ್ಚಿನ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಿ.

ಡಾ.ಶಾಮನೂರು ಶಿವಶಂಕರಪ್ಪ, ಶಾಸಕ

..............

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಶೇ.5 ಅನುದಾನ ಮೀಸಲಿಡಲಾಗುತ್ತದೆ. ವಿಶೇಷ ಚೇತನರಿಗೆ ಅಗತ್ಯವಾದ ಸೌಲಭ್ಯಗಳ ಎಲ್ಲಾ ಇಲಾಖೆಗಳು ಕಲ್ಪಿಸಿಕೊಡಬೇಕಾಗಿರುವುದು ಆಯಾ ಇಲಾಖೆಗಳ ಜವಾಬ್ದಾರಿ.

ಲಕ್ಷ್ಮೀ ಹೆಬ್ಬಾಳಕರ್‌ ಮಹಿಳಾ ಮತ್ತು ಮಕ್ಕಳ ಸಚಿವೆ.