ಸಾರಾಂಶ
ಬಸ್ ಬಂತೆಂದರೆ ಸಾಕು ಪ್ರಯಾಣಿಕರು ಬಸ್ಸಿನ ಆಸನ ಹಿಡಿಯಲು ಹರಸಾಹಸ ಪಡುವಂತಾಗಿದೆ. ಗುರುವಾರವೂ ಇಂತಹದ್ದೇ ಘಟನೆ ನಗರದಲ್ಲಿ ನಡೆದಿದೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಮೇಲೆ ಬಸ್ಸಿನಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ ಹೆಚ್ಚುತ್ತಲೇ ಸಾಗುತ್ತಿದ್ದು, ಗುರುವಾರ ನಗರದಲ್ಲಿಯೂ ಇಂತಹ ಘಟನೆಯೊಂದು ನಡೆದಿದ್ದು, ಸೀಟಿಗಾಗಿ ಮಹಿಳೆಯರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಹಳೇ ಹುಬ್ಬಳ್ಳಿ ಬಸ್ ನಿಲ್ದಾಣದಿಂದ ಕಿಮ್ಸ್‌ಗೆ ಹೋಗುವ ಬಸ್ಸಿನಲ್ಲಿ ಇಬ್ಬರು ಮಹಿಳೆಯರು ಸೀಟ್‌ಗಾಗಿ ವಾಗ್ವಾದ ನಡೆಸಿ ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದ್ದು, ಇದನ್ನು ಬಸ್ಸಿನಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಬಡಿದಾಟದ ಈ ದೃಶ್ಯವನ್ನು ಸೆರೆಹಿಡಿದು, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು, ಅದೀಗ ಭಾರೀ ವೈರಲ್ ಆಗದೆ.
ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಶಕ್ತಿ ಯೋಜನೆ ಆರಂಭವಾದಾಗಿನಿಂದ ಹಲವೆಡೆ ಇಂತಹ ರಾದ್ದಾಂತಗಳು ನಡೆಯುತ್ತಲೇ ಇವೆ. ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿರುವ ಹಿನ್ನೆಲೆಯಲ್ಲಿ ಮಹಿಳೆಯರ ಸಂಖ್ಯೆ ನಿತ್ಯವೂ ಹೆಚ್ಚುತ್ತಲೇ ಸಾಗುತ್ತಿದೆ. ಯಾವುದೇ ಬಸ್ ನೋಡಿದರೂ ಅದರಲ್ಲಿ ಮಹಿಳಾ ಮಣಿಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬರುತ್ತಿದೆ. ಬಸ್ಸಿನಲ್ಲಿ ಕುಳಿತುಕೊಳ್ಳಲು ಆಸನವಿರಲಿ, ನಿಲ್ಲಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ಬಸ್ಸಿನಲ್ಲಿ ಎರಡು ಬಸ್ಸಿನಷ್ಟು ಜನರು ತುಂಬಿಕೊಂಡು ಹೋಗುತ್ತಿವೆ.ಬಸ್ ಬಂತೆಂದರೆ ಸಾಕು ಪ್ರಯಾಣಿಕರು ಬಸ್ಸಿನ ಆಸನ ಹಿಡಿಯಲು ಹರಸಾಹಸ ಪಡುವಂತಾಗಿದೆ. ಗುರುವಾರವೂ ಇಂತಹದ್ದೇ ಘಟನೆ ನಗರದಲ್ಲಿ ನಡೆದಿದೆ. ಬಸ್ಸಿನಲ್ಲಿ ಸೀಟ್ ಹಿಡಿಯುವುದಕ್ಕಾಗಿ ಇಬ್ಬರು ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದು, ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಬಸ್ಸಿನಲ್ಲಿದ್ದ ನಿರ್ವಾಹಕ ಹಾಗೂ ಪ್ರಯಾಣಿಕರು ಇಬ್ಬರೂ ಮಹಿಳೆಯರಿಗೆ ಬುದ್ಧಿವಾದ ಹೇಳಿದ ನಂತರ ಪರಿಸ್ಥಿತಿ ತಿಳಿಯಾಯಿತು.