ಸ್ತ್ರೀಯರಿಗೆ ಬಸವಣ್ಣರಿಂದ ಧಾರ್ಮಿಕ ಸ್ವಾತಂತ್ರ್ಯ ದೊರೆತಿದೆ: ಸಿದ್ಧಲಿಂಗ ಸ್ವಾಮೀಜಿ

| Published : Jun 14 2024, 01:12 AM IST

ಸ್ತ್ರೀಯರಿಗೆ ಬಸವಣ್ಣರಿಂದ ಧಾರ್ಮಿಕ ಸ್ವಾತಂತ್ರ್ಯ ದೊರೆತಿದೆ: ಸಿದ್ಧಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪಂಚದಲ್ಲೆ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ ಮೊದಲಿಗರು ಬಸವಣ್ಣನವರು ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಸಕಲೇಶಪುರದಲ್ಲಿ ಬಸವೇಶ್ವರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸಕಲೇಶಪುರದಲ್ಲಿ ಬಸವೇಶ್ವರ ಪ್ರತಿಮೆ ಅನಾವರಣ । ಮಲೆನಾಡು ವೀರಶೈವ ಸಮಾಜ ಆಯೋಜನೆ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪ್ರಪಂಚದಲ್ಲೆ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ ಮೊದಲಿಗರು ಬಸವಣ್ಣನವರು ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದ ಆವರಣದಲ್ಲಿ ಶ್ರೀ ಮಲೆನಾಡು ವೀರಶೈವ ಸಮಾಜ ಗುರುವಾರ ಹಮ್ಮಿಕೊಂಡಿದ್ದ ಬಸವೇಶ್ವರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ‘ಪ್ರಪಂಚಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಬಸವಣ್ಣ ಹಲವು ಕಟ್ಟಳೆಗಳೊಂದಿಗೆ ತುಳಿಯಲ್ಪಟ್ಟಿದ್ದ ಸ್ತ್ರೀಯರಿಗೆ ಮೊದಲ ಸಮಾನತೆ ನೀಡಿದರು. ಬಸವಣ್ಣನವರ ವಿಚಾರಧಾರೆಗಳು ಭೂಮಿ ಇರುವವರೆಗೂ ಶಶ್ವಾತವಾಗಿರಲಿವೆ’ ಎಂದು ಹೇಳಿದರು.

‘ಭವ ಸಾಗರದಲ್ಲಿ ಬದುಕಬೇಕು ಎಂದರೆ ಬಸವ ಎಂಬ ಮಂತ್ರವನ್ನು ದೀಕ್ಷೆಯನ್ನಾಗಿಸಿಕೊಳ್ಳಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವವನ್ನು ಹಲವು ಶತಮಾನಗಳ ಮುನ್ನವೇ ಸಮಾಜಕ್ಕೆ ನೀಡಿದವರು ಬಸವಣ್ಣನವರು. ಗ್ರಾಮಗಳಲ್ಲಿ ಮೂರ್ತಿ ನಿರ್ಮಿಸುವುದು ಮುಂದಿನ ತಲೆಮಾರಿಗೆ ಆ ವ್ಯಕ್ತಿಯ ತತ್ವ ಸಿದ್ಧಾಂತವನ್ನು ಸಾಗಿಸುವ ಮಾರ್ಗವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಶ್ರೀ ಸುತ್ತೂರು ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿ ಆಶೀರ್ವಚನ ನೀಡಿ, ‘ಬಸವೇಶ್ವರರು ಜಗತ್ತು ಕಂಡ ವಿಶೇಷ ಸಂತರು. ಜಗತ್ತಿನ ಸರ್ವಸತ್ವವನ್ನು ಸಾಮಾನ್ಯ ಜನರಿಗೂ ತಿಳಿಸಿಕೊಟ್ಟ ಬಸವೇಶ್ವರರು ಜಗತ್ತು ಕಂಡ ವಿಶೇಷ ಸಂತರು. ವೇದ, ಉಪನಿಷತ್‌ನಲ್ಲಿರುವ ಎಲ್ಲ ವಿಚಾರಗಳನ್ನು ಸರಳವಾಗಿ ಕನ್ನಡದಲ್ಲಿ ಕಟ್ಟಿಕೊಟ್ಟವರು. ಅಧಿಕಾರವನ್ನು ನಿರ್ವಹಿಸುವ ಪರಿಯನ್ನು ಬಸವಣ್ಣನವರಿಂದ ರಾಜಕೀಯ ವ್ಯಕ್ತಿಗಳು ಕಲಿಯಬೇಕಿದೆ. ಸಮಾಜದ ಮುಖ್ಯ ಸ್ಥಾನದಲ್ಲಿದ್ದ ಬಸವಣ್ಣ ಸತ್ಯದರ್ಮದ ಹಾದಿಗೆ ಚ್ಯುತಿ ಬಂದ ಕ್ಷಣದಲ್ಲೆ ತಮ್ಮ ಅಧಿಕಾರದಿಂದ ಕೆಳಗಿಳಿಯುವ ಮೂಲಕ ಜಗದ್‌ಜ್ಯೋತಿಯಾದರು. ಬಸವಣ್ಣ ಸಮಾಜದ ಎಲ್ಲ ವರ್ಗದವರಿಗೂ ಮಾದರಿಯಾಗಿದ್ದು ಇವರು ಹಾಕಿಕೊಟ್ಟ ಮಾರ್ಗದಲ್ಲೆ ನಡೆದರೆ ಬದುಕು ಪಾವನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಮಲೆನಾಡನ್ನು ಕಾಡುತ್ತಿರುವ ಕಾಡಾನೆ ಸಮಸ್ಯೆ ನಿವಾರಣೆಗೆ ಲೋಕಸಭೆಯಲ್ಲಿ ಪ್ರಾಮಾಣಿಕವಾಗಿ ಹೋರಾಟ ನಡೆಸಲಿದ್ದೇನೆ. ಅಧಿಕಾರ ಇರುವವರೆಗೂ ಎಲ್ಲ ಶಾಸಕರ ಸಹಕಾರ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದೇನೆ. ಬಸವಣ್ಣನವರು ಕೇವಲ ವೀರಶೈವ ಸಮಾಜಕ್ಕೆ ಸೀಮಿತವಲ್ಲ ಅವರ ತತ್ವ ಆದರ್ಶಗಳು ಎಲ್ಲ ಸಮಾಜಕ್ಕೆ ಅನ್ವಯವಾಗುತ್ತವೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಮ ಸಮಾಜದ ಕನಸು ಕಂಡವರು ಬಸವಣ್ಣನವರು. ಬಸವಣ್ಣನವರು ಇನ್ನೂ ಕೆಲಕಾಲ ಬದುಕಿದ್ದರೆ ದೇಶದಲ್ಲಿ ಜಾತಿ ಎಂಬುದು ನಾಶವಾಗುತ್ತಿತ್ತು ಎಂದರು.

ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಬಸವಣ್ಣನ ಪ್ರತಿಮೆ ನಿರ್ಮಾಣದ ಸ್ಥಳದವರೆಗೆ ವಿವಿಧ ಕಲಾಪ್ರಕರಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮಲೆನಾಡ ಸುಗ್ಗಿಕುಣಿತಕ್ಕೆ ಮಹಿಳೆಯರು, ಯುವಕರು ಕುಣಿದು ಕುಪ್ಪಳಿಸಿದರು.

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಸ್ವಾಮೀಜಿ. ಮದ್ದೂರು ಶಾಸಕ ಉದಯ್‌ಗೌಡ, ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್, ಮಾಜಿ ಶಾಸಕರಾದ ಬಿ.ಆರ್.ಗುರುದೇವ್, ಎಚ್.ಕೆ.ಕುಮಾರಸ್ವಾಮಿ, ಎಚ್.ಎಂ. ವಿಶ್ವನಾಥ್, ದಾನಿ ಬನ್ನಹಳ್ಳಿ ಪುನೀತ್, ಬೆಂಗಳೂರು ಜಿಪಂ ಅಧ್ಯಕ್ಷ ಮರಿಸ್ವಾಮಿ, ಅಖಿಲ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಮಧುರ ಅಶೋಕ್‌ಕುಮಾರ್, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್. ದಿವಾನ್, ಕಾರ್ಯದರ್ಶಿ ಧರ್ಮಪ್ಪ, ಮುಖಂಡರಾದ ಮುರುಳಿಮೋಹನ್, ವೀರಶೈವ ಸಮಾಜದ ಮುಖಂಡರಾದ ಹುರುಡಿ ಅರುಣ್, ಪ್ರಶಾಂತ್, ಶಶಿಕುಮಾರ್, ಗಗನ್ ಇದ್ದರು.