ನಮ್ಮ ಸೋಲಿಗೆ ಅಜ್ಞಾನವೇ ಕಾರಣ. ಮಹಿಳೆಗೆ ವ್ಯವಹಾರ ಜ್ಞಾನ ನೀಡಿದರೆ ಅವಳು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದು ಬರಲು ಸಾಧ್ಯ
ಹನುಮಸಾಗರ: ಮಹಿಳೆ ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನಮಾನ ಹೊಂದಿದ್ದಾಳೆ ಎಂದು ಧರ್ಮಸ್ಥಳ ಸಂಘದ ನಿರ್ದೇಶಕ ಪ್ರಕಾಶರಾವ್ ಹೇಳಿದರು.
ಗ್ರಾಮದ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.ನವದುರ್ಗೆಯ ರೂಪ, ಮಗಳು, ತಾಯಿಯಾಗಿ, ಹೆಂಡತಿಯಾಗಿ ಮಹಿಳೆ ನಮ್ಮ ಜೀವನ ಸಲುಹುತ್ತಾಳೆ. ನಮ್ಮ ಸೋಲಿಗೆ ಅಜ್ಞಾನವೇ ಕಾರಣ. ಮಹಿಳೆಗೆ ವ್ಯವಹಾರ ಜ್ಞಾನ ನೀಡಿದರೆ ಅವಳು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದು ಬರಲು ಸಾಧ್ಯ. ಉತ್ತಮ ಆಹಾರ ಸೇವನೆ, ಕಾನೂನಿನ ಅರಿವು ಅಗತ್ಯ. ಮಹಿಳೆಯರು ಸ್ವಉದ್ಯೋಗಿಗಳಾಗಬೇಕು ಎಂದರು.
ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಮಾತನಾಡಿ, ಜ್ಞಾನ ನೀಡುವಂತಹ ಅನೇಕ ಯೋಜನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡಿದೆ. ಕಣ್ಣೀರಿನಿಂದ ಬಂದ ಹಣ ಕಣ್ಣೀರು ಒರೆಸುವ ಉದ್ದೇಶದಿಂದಲೇ ಈ ಯೋಜನೆ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬರಿಗೂ ಒಂದು ಕನಸು ಇರುತ್ತದೆ, ಆ ಕನಸು ನನಸಾಗಲು ಧರ್ಮಸ್ಥಳ ಯೋಜನೆ ಸಹಕಾರಿಯಾಗಿದೆ ಎಂದರು.ಸಹಶಿಕ್ಷಕಿ ಲೀಲಾ ಶೆಟ್ಟರ್ ಮುಂದುವರೆದ ಸಮಾಜದಲ್ಲಿ ಸಂಸ್ಕೃತಿ–ಸಂಸ್ಕಾರ ಮತ್ತು ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿ, ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಮಹತ್ವದ್ದು. ಮಹಿಳೆಯರು ವಿದ್ಯಾಭ್ಯಾಸ ಸ್ವಲ್ಪ ಕಡಿಮೆ ಮಾಡಿದರೂ ಮೊದಲು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಗಳಾಗುವಂತೆ ಬೆಳೆಸಬೇಕು ಎಂದರು.
ತಾಲೂಕು ಯೋಜನಾಧಿಕಾರಿ ನಿರಂಜನ್ ಮಾತನಾಡಿ, ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೇ ಶಿಕ್ಷಣ, ಉದ್ಯೋಗ, ಸ್ವ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಪೌಷ್ಟಿಕ ಆಹಾರ ತಯಾರಿಕಾ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಭಾಗವಹಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕಿ ಪ್ರಭಾ ಪಂಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿ.ವಿ. ಹಿರೇಮಠ, ಸಮನ್ವಯಾಧಿಕಾರಿ ನಂದಾ, ರೂಪಾ, ಮಂಜುಳಾ ಭೋವಿ, ಅಬುಬಕರ, ಸುನಿತಾ ಕೊಮಾರಿ, ಬಸಮ್ಮ ಹಿರೇಮಠ, ಶ್ರೀದೇವಿ ಹಿರೇಮಠ, ಜ್ಞಾನವಿಕಾಸ ಸಮನ್ವಯಾಧಿಕಾರಿ, ಮೇಲ್ವಿಚಾರಕರು, ಸಂಯೋಜಕಿಯರು ಇತರರು ಇದ್ದರು.