ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮುಟ್ಟು ನಿಂತ ಮಹಿಳೆಯರಲ್ಲಿ ಮಂಡಿನೋವು, ಮೂಳೆ ದ್ರವ್ಯರಾಶಿ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ, ೫೦ ವರ್ಷ ಮೇಲ್ಪಟ್ಟ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ, ಕಾಲು ಜಾರಿ ಬಿದ್ದರೂ ಮೂಳೆ ಮುರಿತವಾಗುತ್ತದೆ. ಹೆಚ್ಚು ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಮಧುಮೇಹ ರೋಗ ತಜ್ಞೆ ಡಾ.ಕೆ.ಬಿ.ಶ್ರುತಿ ಹೇಳಿದರು.ನಗರದ ಆಶೋಕ ನಗರದ ಜಿಲ್ಲಾಸ್ಪತ್ರೆ ರಸ್ತೆಯ ಆಕೃತಿ ಆಸ್ಪತ್ರೆ ಆವರಣದಲ್ಲಿ ಅಸೋಸಿಯೇಷನ್ ಆಫ್
ಅಲಯನ್ಸ್ ಸಂಸ್ಥೆ , ಆಕೃತಿ ಆಸ್ಪತ್ರೆ ಆಯೋಜಿಸಿದ್ದ ವಿಶ್ವ ಅಸ್ಟಿಯೊಪೊರೋಸಿಸ್ ದಿನದ ಪ್ರಯುಕ್ತ ಮೂಳೆ ದ್ರವ್ಯರಾಶಿ ಕಡಿಮೆಯಾಗುವುದು, ಮೂಳೆ ಅಂಗಾಂಗಗಳ ನಷ್ಟದಿಂದ ಕಾಯಿಲೆ ಹೆಚ್ಚಾಗುವುದರ ಬಗ್ಗೆ ಅರಿವು, ಉಚಿತ ತಪಾಸಣೆ ಹಾಗೂ ವೈದ್ಯರೊಡನೆ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮೂಳೆಗಳಿಗೆ ಸಮೃದ್ಧ ಪೋಷಕಾಂಶ ನೀಡುವಂತಹ ಕ್ಯಾಲ್ಸಿಯಂ, ವಿಟಮಿನ್- ಡಿ ಮತ್ತು ಪ್ರೋಟಿನ್ ಅಂಶವುಳ್ಳ ಆಹಾರ ಸೇವಿಸುವುದು ಅಗತ್ಯ. ಜೊತೆಗೆ ದೇಹವನ್ನು ಅಗತ್ಯವಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ದೇಹಕ್ಕೆ ಕ್ಯಾಲ್ಸಿಯಂ ಲಭ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಆರೋಗ್ಯಯುತ ಜೀವನಶೈಲಿ ಅಗತ್ಯ, ಧೂಮಪಾನ, ಮದ್ಯಸೇವನೆಯಿಂದ ದೂರವಾಗಿ ಆರೋಗ್ಯಯುತ ಆಹಾರ ನಿರ್ವಹಣೆ ಮೂಲಕ ಸರಿಯಾದ ಬಿಎಂಐ ಕಾಪಾಡುವುದು ಅವಶ್ಯ ಎಂದರು.ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಆಸ್ಟಿಯೊಪೊರೋಸಿಸ್ ಬಗ್ಗೆ ಜಾಗೃತಿ ಮೂಡಿಸಲು ಕೈ ಜೋಡಿಸಿತು. ೧೯೯೯ರಲ್ಲಿ ಆರಂಭಿಕ ಪತ್ತೆ ಎಂಬ ಧ್ಯೇಯವಾಕ್ಯದಲ್ಲಿ ಆಸ್ಟಿಯೊಪೊರೋಸಿಸ್‌ನ್ನು ಅದರ ಆರಂಭಿಕ ಹಂತದಲ್ಲಿ ಗುರುತಿಸುವ ಮಹತ್ವವನ್ನು ಸಾರಿದೆ ಎಂದರು.
ಅಂಕಿ-ಅಂಶಗಳ ಪ್ರಕಾರ ೫೦ ವರ್ಷಕ್ಕಿಂತ ಮೇಲ್ಪಟ್ಟ ಮೂವರಲ್ಲಿ ಒಬ್ಬರು ಮಹಿಳೆಯರು ಮತ್ತು ಐದು ಪುರುಷರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಈ ಸಮಸ್ಯೆಗೆ ಒಳಗಾಗುತ್ತಾರೆ. ೨೦೫೦ರಲ್ಲಿ ಸೊಂಟ ಮುರಿತದಂತಹ ಸಮಸ್ಯೆಗಳ ಅಂಕಿ-ಅಂಶಗಳು ಆಘಾತಕಾರಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ ಎಂದು ನುಡಿದರು.ಪ್ರತಿವರ್ಷ ೮.೯ ದಶಲಕ್ಷ ಮಂದಿ ಮೂಳೆ ಮುರಿತಕ್ಕೆ ಒಳಗಾಗುತ್ತಿದ್ದು, ಪ್ರತಿ ಸೆಕೆಂಡಿಗೆ ಒಬ್ಬರು ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಜಾಗತಿಕವಾಗಿ ೫೦೦ ಮಿಲಿಯನ್ ಪುರುಷರು ಮತ್ತು ಮಹಿಳೆಯರು ಮೂಳೆ ಅಸ್ವಸ್ಥತೆಗೆ ಒಳಗಾಗಿದ್ದಾರೆ ಎಂದು ಎಚ್ಚರಿಸಿದರು.
ಆತಂಕಕಾರಿ ಅಂಶವೆಂದರೆ, ಶೇ ೮೦ರಷ್ಟು ರೋಗಿಗಳು ಆಸ್ಟಿಯೊಪೊರೋಸಿಸ್‌ಗೆ ರೋಗನಿರ್ಣಯ ಚಿಕಿತ್ಸೆ ನೀಡುವುದಿಲ್ಲ,. ಇದು ಈ ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ರೋಗದ ಪರಿಣಾಮಕಾರಿ ನಿರ್ವಹಣೆ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಅಗತ್ಯವುಳ್ಳವರು ಮಂಡಿನೋವು, ಮೂಳೆ ದ್ರವ್ಯರಾಶಿ ತಪಾಸಣೆಯನ್ನು ಉಚಿತವಾಗಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ ರಾಜ್ಯಪಾಲ ಮಾದೇಗೌಡ, ಎರಡನೇ ಉಪರಾಜ್ಯಪಾಲ ಚಂದ್ರಶೇಖರ್, ವೈದ್ಯರಾದ ಡಾ.ಸೋನಾಲಿ ಉಚ್ಚಿಲ್, ಡಾ.ಅವಿನಾಶ್, ಡಾ.ಸುಹಾಸ್, ಜೋಗಿಗೌಡ, ರತ್ನಮ್ಮ, ಪ್ರಮೀಳಾಕುಮಾರಿ ಮತ್ತಿತರರಿದ್ದರು.